ಮೂಡುಬಿದಿರೆ: ಕರಾವಳಿಯ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ಉದ್ದೇಶದಿಂದ ಮಿಜಾರಿನಲ್ಲಿ ನಿರ್ಮಿಸಲಾಗಿರುವ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ (ಆಳ್ವಾಸ್ ಮೆಡಿಕಲ್ ಕಾಲೇಜು) ಸೆಪ್ಟೆಂಬರ್ 21ರಂದು ಲೋಕಾರ್ಪಣೆಯಾಗಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಿಜಾರಿನ ಶ್ರೀಮತಿ ಶೋಭಾ ಮೋಹನ್ ಆಳ್ವ ಆವರಣದಲ್ಲಿ ಸೆ.21ರಂದು ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಮೋಹನ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಪರಂಪರೆಗೆ ವೈದ್ಯಕೀಯ ಶಿಕ್ಷಣದ ಸೇರ್ಪಡೆಯಾಗಿ ಈ ಸಂಸ್ಥೆಯನ್ನು ರೂಪಿಸಲಾಗಿದೆ. ಆಧುನಿಕ ವೈದ್ಯಕೀಯ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಕರುಣೆ ಹಾಗೂ ಸಮಾಜಮುಖಿ ಸೇವಾ ಮನೋಭಾವ ಬೆಳೆಸುವ ವಾತಾವರಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಆಧುನಿಕ ಸೌಲಭ್ಯಗಳೊಂದಿಗೆ ವಿಶಾಲ ಕ್ಯಾಂಪಸ್
ಮಿಜಾರಿನ ವಿಶಾಲ ಪ್ರದೇಶದಲ್ಲಿ ಕಲಾತ್ಮಕ ವಿನ್ಯಾಸ ಹಾಗೂ ಹಸಿರು ಪರಿಸರದೊಂದಿಗೆ ವೈದ್ಯಕೀಯ ಕಾಲೇಜು ನಿರ್ಮಿಸಲಾಗಿದೆ. ವಿಶಾಲ ತರಗತಿ ಕೊಠಡಿಗಳು, ವಿವಿಧ ವಿಭಾಗಗಳು, ಆಧುನಿಕ ಸೌಲಭ್ಯಗಳ ಸಭಾಂಗಣ ಹಾಗೂ 24 ಗಂಟೆಯೂ ಕಾರ್ಯನಿರ್ವಹಿಸುವ ಗ್ರಂಥಾಲಯವನ್ನು ಹೊಂದಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಗತ್ಯ ಮಾನದಂಡಗಳನ್ನು ಪೂರೈಸುವುದರ ಜತೆಗೆ ಹಲವು ವಿಭಾಗಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅನುಭವಿ ಪ್ರಾಧ್ಯಾಪಕರನ್ನು ನೇಮಕ ಮಾಡಲಾಗಿದ್ದು, ಆಧುನಿಕ ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಒದಗಿಸಲಾಗಿದೆ. ಮುಂದಿನ ಹಂತದಲ್ಲಿ ಮಿಜಾರಿನಲ್ಲಿ 650 ಹಾಸಿಗೆಗಳ ಪ್ರತ್ಯೇಕ ಆಸ್ಪತ್ರೆ ನಿರ್ಮಿಸುವ ಯೋಜನೆಯೂ ಇದೆ ಎಂದು ಡಾ. ಮೋಹನ್ ಆಳ್ವ ತಿಳಿಸಿದ್ದಾರೆ.
650 ಹಾಸಿಗೆಗಳ ಆಸ್ಪತ್ರೆ; ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ತರಬೇತಿ
ಬಡವರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಗುಣಮಟ್ಟದ ಹಾಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ 1986ರಲ್ಲಿ ಆರಂಭವಾದ ಆಳ್ವಾಸ್ ಹೆಲ್ತ್ ಸೆಂಟರ್ ಇದೀಗ 650 ಹಾಸಿಗೆಗಳ ಬಹುಶಿಸ್ತೀಯ ಆಸ್ಪತ್ರೆಯಾಗಿ ಬೆಳೆದಿದೆ.
ಪ್ರತಿದಿನ ಸುಮಾರು 800ರಿಂದ 1,000 ಹೊರರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ವ್ಯಾಪಕ ಕ್ಲಿನಿಕಲ್ ತರಬೇತಿ ಮತ್ತು ಪ್ರಾಯೋಗಿಕ ಅನುಭವ ಪಡೆಯಲು ಇದು ನೆರವಾಗಲಿದೆ.
ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸಾ ಕೇಂದ್ರ, ಕ್ಯಾಥ್ ಲ್ಯಾಬ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳಿದ್ದು, 24 ಗಂಟೆಯೂ ಸೇವೆ ಲಭ್ಯವಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯ ಸೌಲಭ್ಯವೂ ಇದೆ.
ತುಳು ಭಾಷಿಕರಿಗೆ 54 ಎಂಬಿಬಿಎಸ್ ಸೀಟು
2026–27ನೇ ಶೈಕ್ಷಣಿಕ ಸಾಲಿಗೆ ಆಳ್ವಾಸ್ ಮೆಡಿಕಲ್ ಕಾಲೇಜಿಗೆ 150 ಎಂಬಿಬಿಎಸ್ ಸೀಟುಗಳ ಮಂಜೂರಾತಿ ದೊರೆತಿದೆ. ಈ ಪೈಕಿ ತುಳು ಭಾಷಿಕ ಅಲ್ಪಸಂಖ್ಯಾತರಿಗೆ 54 ಸೀಟುಗಳು ಲಭ್ಯವಾಗಲಿವೆ. ಇದರಿಂದ ತುಳು ಭಾಷಿಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶ ದೊರೆಯಲಿದೆ.
‘ಮಡಿಲು’ ಯೋಜನೆಯಡಿ ಕೈಗೆಟುಕುವ ಹೆರಿಗೆ ಸೇವೆ
ಆಳ್ವಾಸ್ ಹೆಲ್ತ್ ಸೆಂಟರ್‌ನ ‘ಮಡಿಲು’ ಯೋಜನೆಯಡಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೆರಿಗೆ ಹಾಗೂ ಗರ್ಭಕೋಶಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಸೇರಿದಂತೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಸಮಾಜದ ವಿವಿಧ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ತಲುಪಿಸುವುದು ಯೋಜನೆಯ ಉದ್ದೇಶವಾಗಿದೆ.
ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಸೇವೆ
ಕರ್ನಾಟಕ ಸರ್ಕಾರದ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಬೆಳುವಾಯಿ ಮತ್ತು ಶಕ್ತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆಯನ್ನು ಆಳ್ವಾಸ್ ಹೆಲ್ತ್ ಸೆಂಟರ್ ವಹಿಸಿಕೊಂಡಿದೆ. ಈ ಕೇಂದ್ರಗಳ ಮೂಲಕ ಜನರಿಗೆ ಗುಣಮಟ್ಟದ ಮತ್ತು ಜನಸ್ನೇಹಿ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ.
ಮಾನಸಿಕ ಆರೋಗ್ಯಕ್ಕೆ ವಿಶೇಷ ಆದ್ಯತೆ
ವ್ಯಸನಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಆಳ್ವಾಸ್ ಪುನರ್ಜನ್ಮ ಕೇಂದ್ರವನ್ನು ಮೇಲ್ದರ್ಜೆಗೇರಿಸಿ 50 ಹಾಸಿಗೆಗಳ ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಬಹುಶಿಸ್ತೀಯ ಹಾಗೂ ಸಮಗ್ರ ಮಾನಸಿಕ ಆರೋಗ್ಯ ಚಿಕಿತ್ಸಾ ಸೇವೆಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಆಸ್ಪತ್ರೆಯನ್ನು 200 ಹಾಸಿಗೆಗಳ ಸಾಮರ್ಥ್ಯಕ್ಕೆ ವಿಸ್ತರಿಸುವ ಯೋಜನೆ ಇದೆ ಎಂದರು.
ಹಲವು ಹೊಸ ಚಿಕಿತ್ಸಾ ವಿಭಾಗಗಳ ಯೋಜನೆ
ಮುಂದಿನ ಹಂತದಲ್ಲಿ ವೃದ್ಧರಿಗಾಗಿ ವಿಶೇಷ ಆರೈಕೆ ಮತ್ತು ಚಿಕಿತ್ಸಾ ವಿಭಾಗ, ಡಯಾಲಿಸಿಸ್ ಹಾಗೂ ಕಣ್ಣಿನ ಚಿಕಿತ್ಸೆಗೆ ಪ್ರತ್ಯೇಕ ವಿಭಾಗಗಳು ಮತ್ತು ಹಾಸಿಗೆ ಹಿಡಿದಿರುವ ರೋಗಿಗಳಿಗಾಗಿ ಸುಖಾಂತ್ಯ ಆರೈಕೆ ಕೇಂದ್ರ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಆಳ್ವಾಸ್ ಪುನರ್ಜನ್ಮ ಕೇಂದ್ರವನ್ನೂ ಮತ್ತಷ್ಟು ಉನ್ನತೀಕರಿಸುವ ಯೋಜನೆ ಇದೆ ಎಂದರು.
ಕರುಣೆ ಮತ್ತು ಸೇವಾ ಮನೋಭಾವದ ವೈದ್ಯರ ನಿರ್ಮಾಣ
ವೈದ್ಯಕೀಯ ಶಿಕ್ಷಣವನ್ನು ಕೇವಲ ತಾಂತ್ರಿಕ ಜ್ಞಾನಕ್ಕೆ ಸೀಮಿತಗೊಳಿಸದೆ, ರೋಗಿಗಳು ಹಾಗೂ ಸಮಾಜದ ಬಗ್ಗೆ ಮಾನವೀಯತೆ, ಕರುಣೆ ಮತ್ತು ಸೇವಾ ಮನೋಭಾವ ಹೊಂದಿರುವ ವೈದ್ಯರನ್ನು ರೂಪಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ವಿವಿಧ ವಿಶೇಷ ಚಿಕಿತ್ಸಾ ವಿಭಾಗಗಳಲ್ಲಿನ ನೇರ ಸೇವಾ ಅನುಭವವು ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾಗಲಿದೆ ಎಂದು ಡಾ. ಮೋಹನ್ ಆಳ್ವ ಹೇಳಿದರು.
ಹಿರಿಯ ವೈದ್ಯರ ಸ್ಮರಣೆಗೆ ವಿಭಾಗಗಳಿಗೆ ಹೆಸರು
ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಹಿರಿಯ ವೈದ್ಯರು ಹಾಗೂ ವೈದ್ಯಕೀಯ ದಿಗ್ಗಜರ ಸ್ಮರಣೆಯನ್ನು ಗೌರವಿಸುವ ಉದ್ದೇಶದಿಂದ ಕಾಲೇಜಿನ ವಿವಿಧ ಚಿಕಿತ್ಸಾ ಕೇಂದ್ರಗಳು ಮತ್ತು ವಿಭಾಗಗಳಿಗೆ ಟಿ.ಎಂ.ಎ. ಪೈ, ಡಾ. ಎಸ್. ಕಾಂತ, ಡಾ. ಶಂಕರ್ ನಾಯಕ್, ಡಾ. ವಿ.ಎಸ್. ಆಚಾರ್ಯ, ಡಾ. ಶಾಂತರಾಮ್ ಶೆಟ್ಟಿ, ವಿನಯ್ ಹೆಗ್ಡೆ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಡಾ. ವಿ.ಎಸ್. ಕಾಮತ್, ಡಾ. ಮನೋರಮಾ, ಡಾ. ಕೃಷ್ಣಮೂರ್ತಿ ಹಾಗೂ ಡಾ. ಅಮರನಾಥ್ ಹೆಗ್ಡೆ ಅವರ ಹೆಸರುಗಳನ್ನು ಇಡಲಾಗಿದೆ ಎಂದರು.
ಸೆ.21ರಂದು ಉದ್ಘಾಟನಾ ಸಮಾರಂಭ
ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಸೆ.21ರಂದು ಸಂಜೆ 6 ಗಂಟೆಗೆ ಮಿಜಾರಿನ ಶ್ರೀಮತಿ ಶೋಭಾ ಮೋಹನ್ ಆಳ್ವ ಆವರಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಂಜೆ 5ರಿಂದ 6ರವರೆಗೆ ಉಪಾಹಾರ, 6 ರಿಂದ 7ರವರೆಗೆ ಉದ್ಘಾಟನಾ ಕಾರ್ಯಕ್ರಮ ಹಾಗೂ 7ರಿಂದ 8.15ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
What do you feel about this post?
Like
Love
Happy
Haha
Sad


