ಬೆಂಗಳೂರು: ಕೈ ಹೈಕಮಾಂಡ್ ಕೊನೆಗೂ ತನ್ನ ಚಾಣಾಕ್ಷ ನಡೆಯಿಂದ ಅಧಿಕಾರ ಹಂಚಿಕೆಯ ಬಿಕ್ಕಟ್ಟನ್ನು ಪರಿಹಾರ ಮಾಡುವಲ್ಲಿ ಯಶಸ್ಸು ಕಂಡಿದೆ. ಸಿದ್ದರಾಮಯ್ಯ ಅವರಿಂದಲೇ ಡಿಕೆಶಿ ಹೆಸರನ್ನು ಸಿಎಂ ಪಟ್ಟಕ್ಕೆ ಹೇಳಿಸಿದ್ದು ಅಚ್ಚರಿಯ ನಡೆಗೆ ಕಾರಣ ಆಗಿದೆ. ಎಲ್ಲ ಶಾಸಕರು ಕೈ ಎತ್ತುವ ಮೂಲಕ ಡಿಕೆಶಿಗೆ ಬೆಂಬಲ ಸೂಚನೆ ಮಾಡಿದರು.
ಡಿಕೆಶಿ ಅವರು ಸರಕಾರ ರಚನೆಗೆ ಹಕ್ಕು ಮಂಡಿಸುವುದಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಿದರು. ಬುಧವಾರ ಸಿಎಂ ಆಗಿ ಡಿಕೆಶಿ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಈ ವೇಳೆ ಮಾತನಾಡಿದ ಕೆಸಿ ವೇಣುಗೋಪಾಲ ಅವರು, 2028 ರ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ನಾಯಕತ್ವ ಹಾಗೂ ಸಿದ್ದರಾಮಯ್ಯ ಸಹಕಾರರ ಜತೆಗೆ ಕಾಂಗ್ರೆಸ್ ಕರ್ನಾಟಕದಲ್ಲಿ ಪುನಃ ಅಧಿಕಾರಕ್ಕೆ ಬರಲಿದೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ಸಲಹೆ ಮೇರೆಗೆ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು ಸಿದ್ದರಾಮಯ್ಯ ಪ್ರಸ್ತಾವಿಸಿದರು, ಡಾ.ಜಿ.ಪರಮೇಶ್ವರ್ ಅನುಮೋದಿಸಿದರು ಎಂದರು.



