ಮಂಗಳೂರು: ನಗರದ ಪಡೀಲ್ ರೈಲು ನಿಲ್ದಾಣ ಹಲವು ವರ್ಷಗಳಿಂದ ಅಭಿವೃದ್ಧಿ ಮತ್ತು ಅಗತ್ಯ ರೈಲು ನಿಲುಗಡೆಯಿಂದ ವಂಚಿತವಾಗಿದ್ದು, ಸಾವಿರಾರು ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರವಾರ–ಬೆಂಗಳೂರು ಪಂಚಗಂಗಾ ಸೂಪರ್ ಎಕ್ಸ್‌ಪ್ರೆಸ್‌ಗೆ ಪಡೀಲ್‌ನಲ್ಲಿ ನಿಲುಗಡೆ ಕಲ್ಪಿಸಿ, ಸ್ಥಳೀಯರ ಬಹುಕಾಲದ ಬೇಡಿಕೆಯನ್ನು ಈಡೇರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಆಗ್ರಹಿಸಿದರು.
ಪಡೀಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಅಹವಾಲು ಆಲಿಸಿ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮಂಗಳೂರು ರೈಲು ಸಂಪರ್ಕಕ್ಕೆ 120 ವರ್ಷಗಳ ಇತಿಹಾಸವಿದ್ದರೂ ಪಡೀಲ್ ರೈಲು ನಿಲ್ದಾಣ ಮಾತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಡೀಲ್ ನಿಲ್ದಾಣವನ್ನು ಸ್ಥಳೀಯರಿಗೆ ಅನುಕೂಲವಾಗುವ ಉದ್ದೇಶದಿಂದ ನಿರ್ಮಿಸಲಾಗಿದ್ದರೂ, ಅಗತ್ಯ ಮೂಲಸೌಲಭ್ಯ, ಪ್ರಮುಖ ರೈಲುಗಳ ನಿಲುಗಡೆ ಹಾಗೂ ಅಭಿವೃದ್ಧಿ ಕಾಮಗಾರಿಗಳು ಇದುವರೆಗೆ ನಡೆದಿಲ್ಲ. ಇದರ ಪರಿಣಾಮ ಸಾವಿರಾರು ಜನರು ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ನಿಲ್ದಾಣದ ಸುತ್ತಮುತ್ತ ಸುಮಾರು 1,400ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ರೈಲು ಹಳಿ ದಾಟಿಯೇ ಓಡಾಡುವ ಅನಿವಾರ್ಯತೆ ಇದೆ. ಶಾಲಾ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರು ಜೀವದ ಹಂಗು ತೊರೆದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಎಂದು ಹೇಳಿದರು.
ಪಡೀಲ್ ನಿಲ್ದಾಣವು ಪಾಲಕ್ಕಾಡ್ ರೈಲ್ವೆ ವಿಭಾಗದ ವ್ಯಾಪ್ತಿಗೆ ಬರುವುದರಿಂದ ಶೀಘ್ರದಲ್ಲೇ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪಂಚಗಂಗಾ ಎಕ್ಸ್‌ಪ್ರೆಸ್ ನಿಲುಗಡೆ, ಸುರಕ್ಷಿತ ಪಾದಚಾರಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್ ನಿರ್ಮಾಣ ಸೇರಿದಂತೆ ಸ್ಥಳೀಯರ ಬೇಡಿಕೆಗಳನ್ನು ಮಂಡಿಸುವುದಾಗಿ ಭರವಸೆ ನೀಡಿದರು.
ಈ ಹೋರಾಟ ರಾಜಕೀಯದ ವಿಚಾರವಲ್ಲ. ಸಂಸದರು, ಶಾಸಕರು ಹಾಗೂ ನಾಗರಿಕ ಸಂಘಟನೆಗಳ ಸಹಕಾರದೊಂದಿಗೆ ಪಡೀಲ್ ರೈಲು ನಿಲ್ದಾಣಕ್ಕೆ ಅಗತ್ಯ ಸೌಲಭ್ಯ ದೊರಕಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಡೆನಿಸ್ ಡಿಸಿಲ್ವ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ರಫೀಕ್ ಕಣ್ಣೂರು ಹಾಗೂ ಶಫೀಕ್ ಬೋಳಾರ ಇದ್ದರು.
ರೈಲು ನಿಲುಗಡೆಯಿಂದ ಜನರಿಗೆ ಅನುಕೂಲ
ಕಾರವಾರ–ಬೆಂಗಳೂರು 16596 ಪಂಚಗಂಗಾ ಸೂಪರ್ ಎಕ್ಸ್‌ಪ್ರೆಸ್ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದರೂ ಪಡೀಲ್‌ನಲ್ಲಿ ನಿಲುಗಡೆ ಇಲ್ಲ. ಸುರತ್ಕಲ್‌ನ ಬಳಿಕ ಬಂಟ್ವಾಳದವರೆಗೆ ಯಾವುದೇ ನಿಲುಗಡೆ ಇಲ್ಲದಿರುವುದರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಪಡೀಲ್‌ನಲ್ಲಿ ರೈಲು ನಿಲ್ಲಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುವುದರ ಜತೆಗೆ ನಗರದ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ತಿಳಿಸಿದರು.



