ಉ. ಕ ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಡಿಸಿ ಲಕ್ಷ್ಮಿಪ್ರಿಯಾ ಚಾಲನೆ

ಜಿಲ್ಲಾ ಸುದ್ದಿ ಕಾರವಾರ ಶಿರಸಿ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಗೆ ಮಂಗಳವಾರ ಚಾಲನೆ ದೊರೆತಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ನಮೂನೆಗಳನ್ನು ವಿತರಿಸುವ ಕಾರ್ಯ ಆರಂಭಿಸಿದ್ದಾರೆ.

<

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ತಮ್ಮ ನಿವಾಸದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ನಮೂನೆಗಳನ್ನು ಸ್ವೀಕರಿಸಿ ಮಾತನಾಡಿ, ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ನೀಡಲಾಗುವ ನಮೂನೆಯನ್ನು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ, ಘೋಷಣೆಯನ್ನು ಓದಿ ಸಹಿ ಹಾಗೂ ದಿನಾಂಕ ನಮೂದಿಸಿ ಅಧಿಕಾರಿಗಳಿಗೆ ಹಿಂದಿರುಗಿಸುವಂತೆ ಮನವಿ ಮಾಡಿದರು.

ನಮೂನೆಗಳನ್ನು ಸಂಗ್ರಹಿಸಲು ಅಧಿಕಾರಿಗಳು ಪ್ರತಿ ಮನೆಗೆ ಮೂರು ಬಾರಿ ಭೇಟಿ ನೀಡಲಿದ್ದಾರೆ. ಸಂಬಂಧಪಟ್ಟ ಮತದಾರರು ಮನೆಯಲ್ಲಿ ಇಲ್ಲದಿದ್ದರೆ, ಅವರ ಪರವಾಗಿ ಕುಟುಂಬದ ಸದಸ್ಯರು ಅಥವಾ ರಕ್ತಸಂಬಂಧಿಗಳು ಸಹಿ ಮಾಡಿ ನಮೂನೆಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಸಲ್ಲಿಕೆಯಾಗುವ ನಮೂನೆಗಳ ಆಧಾರದ ಮೇಲೆ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಸಾರ್ವಜನಿಕರು ಖಚಿತಪಡಿಸಿಕೊಳ್ಳಬೇಕು. ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಕೈಬಿಡುವಿಕೆ ಸಂಬಂಧ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ನಂತರ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯ ವಿವಿಧೆಡೆ ಮತದಾರರ ನೆರವು ಕೇಂದ್ರಗಳು ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳ ನೆರವು ಕೇಂದ್ರಗಳನ್ನು ತೆರೆಯಲಾಗಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ಗೊಂದಲ ಅಥವಾ ದೂರುಗಳಿದ್ದಲ್ಲಿ ಉಚಿತ ಸಹಾಯವಾಣಿ 1950 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ವೇಳೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ದಿನಕರ ಶೆಟ್ಟಿ ಹಾಗೂ ಶಿವರಾಮ ಹೆಬ್ಬಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಅವರ ನಿವಾಸಗಳಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ತಹಸೀಲ್ದಾರರು ಭೇಟಿ ನೀಡಿ ನಮೂನೆಗಳನ್ನು ವಿತರಿಸಿ, ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಮಾಹಿತಿ ನೀಡಿದರು.

ಜಿಲ್ಲೆಯ ಗಣ್ಯರು, ಶತಾಯುಷಿಗಳು ಸೇರಿದಂತೆ ಪ್ರತಿಯೊಬ್ಬ ಮತದಾರರ ಮನೆಗೆ ನಮೂನೆಗಳನ್ನು ವಿತರಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಚಾಲನೆ ನೀಡಿದೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *