ಕಾರವಾರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಜೂನ್ 20 ರಿಂದ ಆರಂಭವಾಗಲಿದ್ದು, ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮತಗಟ್ಟೆ ಅಧಿಕಾರಿಗಳು ಜೂನ್ 30 ರಿಂದ ಜುಲೈ 29 ರವರೆಗೆ ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಪ್ರಿ-ಫಿಲ್ಡ್ ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಿದ್ದು, ಭರ್ತಿ ಮಾಡಿದ ಫಾರ್ಮ್‌ಗಳನ್ನು ಕಡ್ಡಾಯವಾಗಿ ಹಿಂದಿರುಗಿಸಬೇಕು ಎಂದು ಅವರು ತಿಳಿಸಿದರು. ಫಾರ್ಮ್ ಮರಳಿ ನೀಡದಿದ್ದರೆ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ ಎಂದು ಎಚ್ಚರಿಸಿದರು.

ಪ್ರಿ-ಫಿಲ್ಡ್ ಫಾರ್ಮ್‌ನಲ್ಲಿ ಮತದಾರರ ಹೆಸರು, ಎಪಿಕ್ ಸಂಖ್ಯೆ, ವಿಳಾಸ, ಭಾಗ ಸಂಖ್ಯೆ, ಕ್ರಮ ಸಂಖ್ಯೆ ಹಾಗೂ ಫೋಟೋ ಈಗಾಗಲೇ ಮುದ್ರಿತವಾಗಿರುತ್ತದೆ. ಮತದಾರರು ಅಥವಾ ಕುಟುಂಬ ಸದಸ್ಯರು ಸಹಿ ಮಾಡಿ ಇತ್ತೀಚಿನ ಬಣ್ಣದ ಫೋಟೋ ನೀಡಬೇಕಾಗುತ್ತದೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ 6 ಮತದಾರರ ನೋಂದಣಾಧಿಕಾರಿಗಳು, 12 ಸಹಾಯಕ ಮತದಾರರ ನೋಂದಣಾಧಿಕಾರಿಗಳು, 1,445 ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಹಾಗೂ 144 ಮೇಲ್ವಿಚಾರಕರು ನೇಮಕಗೊಂಡಿದ್ದಾರೆ ಎಂದು ತಿಳಿಸಿದರು. ಜೊತೆಗೆ ವಿವಿಧ ಹಂತಗಳಲ್ಲಿ ನೋಡಲ್ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 12,30,016 ಮತದಾರರಿದ್ದು, ಮ್ಯಾಪಿಂಗ್ ಪ್ರಕ್ರಿಯೆ ಶೇ.93.47ರಷ್ಟು ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ಕರಡು ಮತದಾರರ ಪಟ್ಟಿ ಆಗಸ್ಟ್ 5 ರಂದು ಪ್ರಕಟವಾಗಲಿದೆ. ಸೆಪ್ಟೆಂಬರ್ 4 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಅಕ್ಟೋಬರ್ 3 ರವರೆಗೆ ಅವುಗಳ ವಿಲೇವಾರಿ ನಡೆಯಲಿದ್ದು, ಅಕ್ಟೋಬರ್ 7 ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಇದ್ದರು.
What do you feel about this post?
Like
Love
Happy
Haha
Sad
