ಮಂಗಳೂರಿನಲ್ಲಿ ನಾಗರಿಕ ಸೇವಾ ಪರೀಕ್ಷೆಗಳ ತರಬೇತಿ ಕೇಂದ್ರ ಉದ್ಘಾಟಿಸಿದ ಡಾ. ಹೆನ್ರಿ ಡಿಸೋಜ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಆರಂಭಿಸಲಾದ ಹೊಸ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ ನಗರದ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನಡೆಯಿತು.

ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಡಾ. ಹೆನ್ರಿ ಡಿಸೋಜ ಅವರು ಉದ್ಘಾಟನೆ ನೆರವೇರಿಸಿದರು. ಬಳಿಕ ರಾಮಕೃಷ್ಣ ಮಠದ ಸ್ವಾಮಿ ಯುಗಾನಂದ ದೀಪ ಬೆಳಗಿಸಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಹೆನ್ರಿ ಡಿಸೋಜ ಅವರು, ನಾವು ಎಲ್ಲಿ ಹುಟ್ಟಿದ್ದೇವೆ ಎಂಬುದು ಮುಖ್ಯವಲ್ಲ. ಜೀವನದಲ್ಲಿ ಯಾವ ಗುರಿ ತಲುಪುತ್ತೇವೆ, ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆ ಎಂಬುದೇ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸ್ವಾಮಿ ಯುಗಾನಂದ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ, ಬ್ಯಾಂಕಿಂಗ್, ವಾಣಿಜ್ಯ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದರೂ, ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮರ್ಪಿತ ತರಬೇತಿ ಕೇಂದ್ರದ ಕೊರತೆ ಇತ್ತು. ಇದೀಗ ಈ ಕೊರತೆ ನೀಗಿರುವುದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.

ಡೈಜಿ ವರ್ಲ್ಡ್‌ನ ನಿರ್ದೇಶಕ ವಾಲ್ಟರ್ ನಂದಳಿಕೆ ಅವರು ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸೂಕ್ತ ಮಾರ್ಗದರ್ಶನದ ಕೊರತೆ ಅನುಭವಿಸಿದ್ದಾಗಿ ತಿಳಿಸಿದರು. ಈಗ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಮಾಹಿತಿ ಸುಲಭವಾಗಿ ಲಭ್ಯವಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಇಂತಹ ತರಬೇತಿಗೆ ಮುಂದಾಗುತ್ತಿರುವುದು ಸಂತಸದ ಬೆಳವಣಿಗೆ ಎಂದು ಹೇಳಿದರು.

ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾದರ್ ರೋಷನ್ ರೊಸಾರಿಯೊ ಸ್ವಾಗತಿಸಿದರು. ಸಂಸ್ಥೆಯ ಸ್ಥಾಪಕ ಸಂತೋಷ್ ರಾವ್ ತರಬೇತಿ ಕೇಂದ್ರದ ಉದ್ದೇಶ ಹಾಗೂ ವಿವಿಧ ತರಬೇತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಪ್ರತಿಷ್ಠಾನದ ಟ್ರಸ್ಟಿ ರಾಯ್ ಕ್ಯಾಸ್ಟಲಿನೊ ವಂದಿಸಿದರು. ಜಾಸ್ಮಿನ್ ಜೆನ್ನಿಫರ್ ನಿರೂಪಿಸಿದರು. ರಾಷ್ಟ್ರಗೀತೆ ಜತೆಗೆ ಕಾರ್ಯಕ್ರಮ ಮುಕ್ತಾಯವಾಯಿತು.

Leave a Reply

Your email address will not be published. Required fields are marked *