ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾಳದಕಟ್ಟಾದಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆಯ ಮೇಲಿನ ದರೋಡೆ ಪ್ರಕರಣವನ್ನು ಸಿರಸಿ–ಸಿದ್ದಾಪುರ ಪೊಲೀಸರು ಭೇದಿಸಿದ್ದು, ಕೃತ್ಯ ಎಸಗಿದ್ದ ಆರೋಪಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಬಂಧಿತ ಕೊಂಡ್ಲಿ ನಿವಾಸಿ ಹಾಗೂ ಕೂಲಿ ಕಾರ್ಮಿಕ ಮಹೇಶ ಹನುಮಂತ ಮಡಿವಾಳ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಕಳವು ಮಾಡಿದ್ದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೂನ್ 22ರಂದು ಸಂಜೆ ಹಾಳದಕಟ್ಟಾದ ನಿವಾಸಿ ಪೂನಂ ಗಣಪತಿ ಶೇಟ್ ಅವರ ಮನೆಗೆ ನುಗ್ಗಿದ್ದ ಆರೋಪಿ, ಕತ್ತಿ ತೋರಿಸಿ ಜೀವ ಬೆದರಿಕೆ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿದ್ದ. ಪ್ರತಿರೋಧ ವ್ಯಕ್ತಪಡಿಸಿದರೂ ಆರೋಪಿ ಬಲವಂತವಾಗಿ ಸರವನ್ನು ತುಂಡರಿಸಿ ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಪ್ರಕರಣ ದಾಖಲಾದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಜಿ. ಹಾಗೂ ಸಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಸಿದ್ದಾಪುರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಜೆ.ಬಿ. ಸೀತಾರಾಮ ಅವರ ನೇತೃತ್ವದ ತಂಡದಲ್ಲಿ ಪಿಎಸ್ ಐಗಳಾದ ಶಾಂತಿನಾಥ, ನಾಗಪ್ಪ ಸೇರಿದಂತೆ ಹಲವು ಸಿಬ್ಬಂದಿ ಇದ್ದರು.
ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳೀಯ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಕೊಂಡ್ಲಿಯ ಮಹೇಶ ಮಡಿವಾಳನ ಮೇಲೆ ಅನುಮಾನ ವ್ಯಕ್ತವಾಗಿತ್ತು. ಬಳಿಕ ವಿಚಾರಣೆ ವೇಳೆ ಆತನೇ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ಕಳವು ಮಾಡಿದ್ದ ಚಿನ್ನದ ತಾಳಿ ಹಾಗೂ ಬೈಕ್ ಅನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನು ಶೀಘ್ರ ಭೇದಿಸಿದ ಸಿದ್ದಾಪುರ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
What do you feel about this post?
Like
Love
Happy
Haha
Sad



