ಮಂಗಳೂರು: ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಈ ಬಾರಿ ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣ ಕಾರಿಂಜೇಶ್ವರ ಬೆಟ್ಟದಲ್ಲಿ ‘ಯೋಗ ವಿದ್ ಯೋಧ’ ಬೃಹತ್ ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 21ರಂದು 3 ಗಂಟೆಗೆ ಮಹಾತೋಭಾರ ಕಾರಿಂಜೇಶ್ವರ ದೇವಸ್ಥಾನದ ಆವರಣದಲ್ಲಿ 3ನೇ ಆವೃತ್ತಿಯ ಯೋಗ ವಿದ್ ಯೋಧ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ನಿವೃತ್ತ ಯೋಧರು, ಗಣ್ಯರು, ಯೋಗಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಯೋಗಪಟು ಗೋಪಾಲಕೃಷ್ಣ ದೇಲಂಪಾಡಿ ಮಾರ್ಗದರ್ಶನ ನೀಡಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆರಂಭವಾದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಈಗ 180ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತಿದ್ದು, ಈ ವರ್ಷದ ಧ್ಯೇಯವಾಕ್ಯ “ಆರೋಗ್ಯಕರ ವಯಸ್ಸಿಗೆ ಯೋಗ” ಆಗಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಯೋಗ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಎಂದು ತಿಳಿಸಲಾಗಿದೆ.
ಈ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಉತ್ತೇಜನದ ದೃಷ್ಟಿಯಿಂದ ಜಿಲ್ಲೆಯ ವಿವಿಧ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಆಯೋಜಿಸಲಾಗುತ್ತಿದೆ. ಹಿಂದಿನ ವರ್ಷ ಸಸಿಹಿತ್ಲು ಹಾಗೂ ಸೋಮೇಶ್ವರ ಕಡಲತೀರದಲ್ಲಿ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ಸಮುದ್ರಮಟ್ಟದಿಂದ 1500 ಅಡಿ ಎತ್ತರದಲ್ಲಿರುವ ಕಾರಿಂಜೇಶ್ವರ ಬೆಟ್ಟದಲ್ಲಿ ಆಯೋಜಿಸಲಾಗಿದೆ.
ಕರಾವಳಿಯ ಶ್ರೀಮಂತ ಪರಂಪರೆ ಹಾಗೂ ಪ್ರಕೃತಿ ಸೌಂದರ್ಯವನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಪ್ರಚಾರ ನೀಡುವಂತೆ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
What do you feel about this post?
Like
Love
Happy
Haha
Sad
