ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಎಸ್‌ಐಆರ್ ಕರ್ತವ್ಯಕ್ಕೆ ಸಿಬ್ಬಂದಿ ನಿಯೋಜಿಸಿರುವ ನೆಪದಲ್ಲಿ ಜುಲೈ 29 ರವರೆಗೆ ಜನನ ಮತ್ತು ಮರಣ ನೋಂದಣಿ ಅರ್ಜಿಗಳ ಸ್ವೀಕಾರ ಸ್ಥಗಿತಗೊಳಿಸಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.
ಜನರ ಅಗತ್ಯ ಸೇವೆಗಳನ್ನು ಸ್ಥಗಿತಗೊಳಿಸಿರುವ ಮಹಾನಗರ ಪಾಲಿಕೆ ಆಡಳಿತ ಕೂಡಲೇ ಈ ನಿರ್ಧಾರ ಹಿಂಪಡೆದು ಅರ್ಜಿ ಸ್ವೀಕಾರ ಹಾಗೂ ಪ್ರಮಾಣ ಪತ್ರ ವಿತರಣೆಯನ್ನು ಸುಗಮಗೊಳಿಸಬೇಕು. ಆಡಳಿತಾಧಿಕಾರಿ ಮೂಲಕ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಇನ್ನು ಒಂದು ತಿಂಗಳು ಮಂಗಳೂರಿನಲ್ಲಿ ಜನನ, ಮರಣಗಳೇ ನಡೆಯುವುದಿಲ್ಲವೇ ? ಶಾಲಾ ದಾಖಲಾತಿಗೆ ಜನನ ಪ್ರಮಾಣಪತ್ರ ಬೇಕಿರುವ ಮಕ್ಕಳು, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವವರು ಏನು ಮಾಡಬೇಕು? ಎಂದು ಆರೋಪಿಸಿದರು.
ಸಾರ್ವಜನಿಕರ ಆಕ್ಷೇಪದ ಬಳಿಕ ಅರ್ಜಿ ಸ್ವೀಕಾರ ಆರಂಭಿಸಿದ್ದರೂ, ಪ್ರಮಾಣ ಪತ್ರವನ್ನು ತ್ವರಿತವಾಗಿ ನೀಡುವುದಿಲ್ಲ ಎಂಬ ಷರತ್ತು ವಿಧಿಸಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ರೂ. ಇದ್ದ ಜನನ-ಮರಣ ಪ್ರಮಾಣಪತ್ರ ಶುಲ್ಕವನ್ನು ಕಾಂಗ್ರೆಸ್ ಸರ್ಕಾರ 75 ರೂ.ಗೆ ಏರಿಕೆ ಮಾಡಿದೆ ಎಂದು ಆರೋಪಿಸಿದರು.
ನಗರ ವ್ಯಾಪ್ತಿಯಲ್ಲಿ ಭೂಪರಿವರ್ತನೆ ಪ್ರಕ್ರಿಯೆ ಗೊಂದಲಕ್ಕೆ ಸಿಲುಕಿದ್ದು, ಕಂದಾಯ ಇಲಾಖೆಯಿಂದ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜವಾಬ್ದಾರಿ ವರ್ಗಾಯಿಸಿದರೂ, ಅಗತ್ಯ ದಾಖಲೆ ಹಾಗೂ ತಾಂತ್ರಿಕ ವ್ಯವಸ್ಥೆ ಒದಗಿಸದ ಪರಿಣಾಮ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕನ್ವರ್ಷನ್ ಆಗದ ಕಾರಣ ಭೂ ಖರೀದಿ-ಮಾರಾಟ ವ್ಯವಹಾರಗಳೂ ಸ್ಥಗಿತಗೊಂಡಿವೆ ಎಂದು ದೂರಿದರು.
ಕಂದಾಯ ಹಾಗೂ ನಗರಾಭಿವೃದ್ಧಿ ಇಲಾಖೆಯ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ತಕ್ಷಣವೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಹಾಗೂ ಮಂಗಳಾ ಆಚಾರ್ ಇದ್ದರು.
ಕಾಂಗ್ರೆಸ್ ಅಧಿಕಾರ ದುರುಪಯೋಗ: ಕಾಮತ್
ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಆಡಳಿತ ವ್ಯವಸ್ಥೆ ದುರುಪಯೋಗ ಮಾಡಿಕೊಳ್ಳುತ್ತಿದೆ. ಒಂದೇ ಕಡೆ ಜನರನ್ನು ಒಟ್ಟಾಗಿ ಸೇರಿಸಿ ಎಸ್‌ಐಆರ್ ಅರ್ಜಿ ನಮೂನೆ ಭರ್ತಿ ಮಾಡಲಾಗುತ್ತಿದೆ. ವಿದೇಶದಲ್ಲಿ ಇದ್ದವರ ಅರ್ಜಿಗಳನ್ನು ಭರ್ತಿ ಮಾಡಿ ಸಹಿ ಮಾಡಲಾಗುತ್ತಿದೆ. ವಾಸ್ತವ್ಯ ಪ್ರಮಾಣ ಪತ್ರ ನೀಡಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಅನರ್ಹರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಹುನ್ನಾರ ನಡೆಯುತ್ತಿದೆ. ಈ ಎಲ್ಲದರ ಬಗ್ಗೆ ದಾಖಲೆ ಮೂಲಕ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.
What do you feel about this post?
Like
Love
Happy
Haha
Sad



