ಮಂಗಳೂರು: ಕಲ್ಕೂರ ಪ್ರತಿಷ್ಠಾನ ಮಂಗಳೂರು ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದಲ್ಲಿ ಸಾವಯವ ಕೃಷಿಕರು ಬೆಳೆಸಿದ ವಿಶಿಷ್ಟ ತಳಿಗಳ ಮಾವು ಮತ್ತು ಹಲಸಿನ ಸಮೃದ್ಧಿಯನ್ನು ಪರಿಚಯಿಸುವ ಮಾವು–ಹಲಸು ಮೇಳವನ್ನು ಜೂನ್ 20 ಮತ್ತು 21ರಂದು ನಗರದ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯ ‘ಮಂಜು ಪ್ರಾಸಾದ’ದ ಆವರಣದಲ್ಲಿ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಆಯೋಜನೆ ಮಾಡಲಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ನಾಡು–ನುಡಿ ಜಾಗೃತಿ ಸಮ್ಮೇಳನ ಸರಣಿ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ಈ ಮೇಳದಲ್ಲಿ ಕೃಷಿಕರು ಹಾಗೂ ಗ್ರಾಹಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಶುಲ್ಕ ಇಲ್ಲ, ಮೇಳಕ್ಕೆ ಬರುವ ರೈತರಿಗೆ ಎರಡು ದಿನವೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಜೂನ್ 20 ರಂದು ಬೆಳಿಗ್ಗೆ 10 ಗಂಟೆಗೆ ಜಿತಕಾಮಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಶರವು ರಾಘವೇಂದ್ರ ಶಾಸ್ತ್ರಿ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಡಾ. ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವೈದ್ಯ ಡಾ. ಜೀವರಾಜ ಸೊರಕೆ ಅವರು ಮೇಳವನ್ನು ಉದ್ಘಾಟಿಸಲಿದ್ದು, ಶಾಸಕ ಡಿ. ವೇದವ್ಯಾಸ ಕಾಮತ್ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಜೂನ್ 21ರಂದು ಯೋಗ, ಸಾವಯವ ಆಹಾರ–ಆರೋಗ್ಯ ಭಾಗ್ಯ ಶೀರ್ಷಿಕೆಯಡಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಜಾಗೃತಿ ಸಂದೇಶ ನೀಡಲಿದ್ದಾರೆ. ಪಡುಬಿದ್ರೆಯ ಆಯುರ್ವೇದ ವೈದ್ಯ ಹಾಗೂ ಪಾರಂಪರಿಕ ನಾಟಿ ತಜ್ಞ ಡಾ. ಎನ್.ಟಿ. ಅಂಚನ್ ಅವರು ಮಾವು ಮತ್ತು ಹಲಸಿನ ಆಹಾರ ಸೇವನೆಯ ವೈಜ್ಞಾನಿಕ ಮಹತ್ವದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.
ಸಚಿವ ಯು.ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪರಿಸರ ತಜ್ಞ ಹಾಗೂ ಸ್ವದೇಶಿ ಗೋವುಗಳ ಮತ್ತು ಪ್ರಾದೇಶಿಕ ಸಸ್ಯಗಳ ತಳಿ ಸಂರಕ್ಷಕ ಡಾ. ಮನೋಹರ್ ಉಪಾಧ್ಯಾಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ರಾಮನಗರ, ಮಂಡ್ಯ, ಮೈಸೂರು, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳ ಕೃಷಿಕರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ತಳಿಯ ಮಾವು, ಹಲಸು, ಅವುಗಳಿಂದ ತಯಾರಿಸಿದ ಮೌಲ್ಯವರ್ಧಿತ ಆಹಾರ ಪದಾರ್ಥಗಳು, ತಾವರೆ ಹೂವು ಮತ್ತು ಜಲಸಸ್ಯಗಳು, ಗಿಡಗಳು, ದೇಸಿ ತರಕಾರಿ ಬೀಜಗಳು, ಕೃಷಿ ಉಪಕರಣಗಳು ಹಾಗೂ ಕೃಷಿ ಸಾಹಿತ್ಯ ಕೃತಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯ ಇವೆ ಎಂದರು.
ಇದೇ ವೇಳೆ, ಎರಡು ದಿನಗಳ ಕಾಲ ಬೆಳಿಗ್ಗೆ 8ರಿಂದ ಸಂಜೆ 7ರವರೆಗೆ ವಾದಿರಾಜ ಮಂಟಪದ ಪೇಜಾವರ ವಿಶ್ವೇಶತೀರ್ಥ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿವೆ. ಸಾವಯವ ಕೃಷಿಕರು ಮತ್ತು ಗ್ರಾಹಕರನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ. ಸ್ಥಳೀಯ ಕೃಷಿ ಉತ್ಪನ್ನಗಳ ಬಳಕೆ ಹಾಗೂ ಆರೋಗ್ಯಕರ ಆಹಾರ ಪದ್ಧತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ಗುರಿಯಾಗಿದೆ. ಎಂದರು.
ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ ಜಿ.ಆರ್. ಪ್ರಸಾದ್, ಸುಧಾಕರ ರಾವ್ ಪೇಜಾವರ, ಜನಾರ್ಧನ ಹಂದೆ, ಶಿವಪ್ರಸಾದ್ ಪ್ರಭು ಹಾಗೂ ದಯಾನಂದ ಕಟೀಲು ಇದ್ದರು.
What do you feel about this post?
Like
Love
Happy
Haha
Sad
