ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಹೆಸರಿನಲ್ಲಿ ಲಕ್ಷಾಂತರ ಅರ್ಹ ಫಲಾನುಭವಿಗಳ ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಕತ್ತರಿ ಹಾಕಿದ್ದು, ಇದರ ಮೂಲಕ ತನ್ನ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬ್ಯಾಂಕ್ ಖಾತೆಯೇ ಇಲ್ಲದ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ಪಾವತಿಯಾಗಿರುವುದು, ಒಂದೇ ಬ್ಯಾಂಕ್ ಖಾತೆಗಳಿಗೆ ಹಲವು ಬಾರಿ ಹಣ ವರ್ಗಾವಣೆಯಾಗಿರುವುದು ಹಾಗೂ ಮರಣ ಹೊಂದಿದವರ ಹೆಸರಿಗೂ ಹಣ ಜಮೆಯಾಗಿರುವುದು ಲೆಕ್ಕಪರಿಶೋಧನಾ ವರದಿಯಲ್ಲಿ ಬಹಿರಂಗವಾಗಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದಲೇ ಸರ್ಕಾರ ಅರ್ಹ ಫಲಾನುಭವಿಗಳಿಗೂ ಯೋಜನೆಗಳ ಸೌಲಭ್ಯವನ್ನು ಸ್ಥಗಿತಗೊಳಿಸಿ ಗೊಂದಲ ಸೃಷ್ಟಿಸಿದೆ ಎಂದು ಅವರು ಟೀಕಿಸಿದ್ದಾರೆ.
ರಾಜ್ಯದ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕಿನಲ್ಲಿ ಸರ್ಕಾರ ರಚಿಸಿರುವ ಗ್ಯಾರಂಟಿ ಅನುಷ್ಠಾನ ಸಮಿತಿಗಳು ಏನು ಕಾರ್ಯ ನಿರ್ವಹಿಸುತ್ತಿವೆ ಎಂಬ ಪ್ರಶ್ನೆಯನ್ನೂ ವೇದವ್ಯಾಸ ಕಾಮತ್ ಎತ್ತಿದ್ದಾರೆ. ಜನರ ತೆರಿಗೆ ಹಣದಿಂದ ಈ ಸಮಿತಿಗಳಿಗೆ ವೇತನ, ಭತ್ಯೆ ಹಾಗೂ ವಾಹನ ಸೇರಿದಂತೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಅಕ್ರಮಗಳಲ್ಲಿ ಸಮಿತಿಯ ಸದಸ್ಯರಿಗೂ ಪಾತ್ರವಿದೆಯೇ ಹಾಗೂ ಸರ್ಕಾರ ಅವರ ರಕ್ಷಣೆಗೆ ನಿಂತಿದೆಯೇ ಎಂಬ ಅನುಮಾನಗಳು ಮೂಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ಕೂಡಲೇ ವಿಸರ್ಜಿಸಬೇಕು. ಯಾವುದೇ ಕಾರ್ಯ ನಿರ್ವಹಿಸದೆ ಪಡೆದಿರುವ ಸಂಬಳ ಹಾಗೂ ಭತ್ಯೆಯನ್ನು ವಸೂಲಿ ಮಾಡಬೇಕು. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ನಡೆದಿರುವ ಅಕ್ರಮಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಮಹಾ ಮೋಸ ಮಾಡಿದ್ದು, ಅದಕ್ಕೆ ಮುಂಬರುವ ದಿನಗಳಲ್ಲಿ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad



