ವಿಜಯಪುರ: ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವೆ ಜಮೀನು ವಿವಾದದ ಹಿನ್ನೆಲೆ ಈ ಕೊಲೆ ನಡೆದಿದೆ ಎನ್ನಲಾಗುತ್ತಿದ್ದು, ಒಂದೇ ಕುಟುಂಬದ 5 ಮಂದಿ ಹಾಗೂ ಒಬ್ಬ ಆಳು ಮನುಷ್ಯ ಸೇರಿದಂತೆ ಒಟ್ಟು 6 ಜನರ ಬರ್ಬರ ಹತ್ಯೆಗೆ ಬೆಚ್ಚಿ ಬೀಳುವಂತಾಗಿದೆ.
ಹಂತಕರು ಗನ್‌ನಿಂದ ಫೈರಿಂಗ್ ಮಾಡಿ, ಭೀಕರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು, ಭೀಮಾತೀರದಲ್ಲಿ ಮತ್ತೆ ಹಳೆಯ ರಕ್ತಚರಿತ್ರೆಯ ಕರಾಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಜಮೀನಿನ ವಿಚಾರವಾಗಿ ದ್ವೇಷ ಇತ್ತು ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಗೋವಿಂದಪುರ ಗ್ರಾಮದ ಪ್ರಭಾವಿ ನಿರಾಳೆ ಕುಟುಂಬದ ಸದಸ್ಯರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹತ್ಯೆ ಆದವರನ್ನು ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ ಹಾಗೂ ಅವರ ತೋಟದ ಮನೆಯಲ್ಲಿದ್ದ ಶಬ್ಬಿರ್ ನದಾಫ್ ಎಂದು ಗುರುತಿಸಲಾಗಿದೆ. ಹಂತಕರು ಆಕ್ರೋಶಕ್ಕೆ ತೋಟದ ಮನೆಯಲ್ಲಿದ್ದ ಕುಟುಂಬವೇ ನಾಶವಾಗಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಗೋವಿಂದಪುರ ಗ್ರಾಮಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.



