ಜೈಲಿನಿಂದ ಪರಾರಿಯಾಗಿದ್ದ ಕೈದಿ ಮೇಲೆ ಪೊಲೀಸ್ ಗುಂಡಿನ ದಾಳಿ; ಓರ್ವ ಬಂಧನ

ಅಂತರ ಜಿಲ್ಲೆ ಅಪರಾಧ ರಾಜ್ಯ

Spread the love

ಕಲಬುರಗಿ: ಕೇಂದ್ರ ಕಾರಾಗೃಹದಿಂದ ಬ್ಯಾರಕ್ ಕಂಬಿಗಳನ್ನು ಕತ್ತರಿಸಿ ಪರಾರಿಯಾಗಿದ್ದ ಮೂವರು ಶಿಕ್ಷಿತ ಕೈದಿಗಳ ಪೈಕಿ ಓರ್ವನಾದ ಸಂತೋಷ ಬಸಪ್ಪ ಮೇತ್ರೆ ಮೇಲೆ ಬುಧವಾರ ಬೆಳಿಗ್ಗೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.

ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಸಂತಾಪುರ ಗ್ರಾಮದ ನಿವಾಸಿಯಾಗಿರುವ ಸಂತೋಷ ಬಸಪ್ಪ ಮೇತ್ರೆ, ಪೋಕ್ಸೊ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯಾಗಿದ್ದಾನೆ. ಪರಾರಿಯಾದ ಬಳಿಕ ನಗರ ಹೊರವಲಯದ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಪತ್ತೆಯಾದಾಗ ಬಂಧಿಸಲು ಮುಂದಾದ ಪೊಲೀಸರ ಮೇಲೆ ಪ್ರತಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಗಾಯಗೊಂಡ ಕೈದಿಯನ್ನು ತಕ್ಷಣವೇ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಇಬ್ಬರು ಪರಾರಿಯಾದ ಕೈದಿಗಳಿಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇದಕ್ಕೂ ಮೊದಲು, ಕೇಂದ್ರ ಕಾರಾಗೃಹದ ಬ್ಯಾರಕ್‌ನ ಕಂಬಿಗಳನ್ನು ಕತ್ತರಿಸಿ ಮೂವರು ಕೈದಿಗಳು ಪರಾರಿಯಾಗಿದ್ದರು. ಜೈಲಿನಿಂದ ಹೊರಬಂದು ನಿರಾಳವಾಗಿ ನಡೆದು ಕಾರು ಹತ್ತಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಳಿಕ ಬೀದರ್–ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಪರಾರಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಈ ಘಟನೆ ರಾಜ್ಯದ ಕಾರಾಗೃಹ ಭದ್ರತೆ ಕುರಿತು ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪ್ರಕರಣದ ಕುರಿತು ಪೊಲೀಸರು ಹಾಗೂ ಕಾರಾಗೃಹ ಇಲಾಖೆ ತನಿಖೆ ಮುಂದುವರೆಸಿವೆ.

Leave a Reply

Your email address will not be published. Required fields are marked *