ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪದಡಿ ಜೈಲು ಅಧೀಕ್ಷಕ ಸೇರಿದಂತೆ 9 ಮಂದಿ ಸಿಬ್ಬಂದಿ ಅಮಾನತುಗೊಳಿಸಲಾಗಿದೆ.
ಕಾರಾಗೃಹ ಇಲಾಖೆಯ ಮಹಾನಿರ್ದೇಶಕ ಅಲೋಕ್ ಕುಮಾರ್ ಈ ಸಂಬಂಧ ಆದೇಶ ಹೊರಡಿಸಿದ್ದು, ಜೈಲಿನ ಭದ್ರತೆಯಲ್ಲಿ ಗಂಭೀರ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಮಾನತುಗೊಂಡವರಲ್ಲಿ ಜೈಲು ಅಧೀಕ್ಷಕ ರಾಕೇಶ್ ಕಾಂಬಳೆ, ಸಹಾಯಕ ಅಧೀಕ್ಷಕ ಬಿ. ಸುರೇಶ್, ಜೈಲರ್ ಶ್ರೀಮಂತಗೌಡ ಪಾಟೀಲ್ ಹಾಗೂ ರಾತ್ರಿ ಪಾಳಿಯ ವಾರ್ಡರ್ಗಳಾದ ನಿಂಗಣ್ಣ, ಯಮನಪ್ಪ ಕರುಬರ, ಬಸವರಾಜ್ ಮೇತ್ರಿ, ಸಾವಿತ್ರಿ ತಳಕೇರಿ ಮತ್ತು ಅಜೀಮ್ ಸೇರಿದ್ದಾರೆ.
ಕೇಂದ್ರ ಕಾರಾಗೃಹದ ಬ್ಯಾರಕ್ ಕಂಬಿಗಳನ್ನು ಕತ್ತರಿಸಿ ಮೂವರು ಕೈದಿಗಳು ಪರಾರಿಯಾಗಿದ್ದ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಪ್ರಕರಣದ ತನಿಖೆ ಮುಂದುವರೆದಿರುವ ನಡುವೆಯೇ ಭದ್ರತಾ ಲೋಪಕ್ಕೆ ಹೊಣೆಗಾರರೆಂದು ಪರಿಗಣಿಸಿ ಕಾರಾಗೃಹ ಇಲಾಖೆ ಈ ಶಿಸ್ತು ಕ್ರಮ ಕೈಗೊಂಡಿದೆ. ಉಳಿದ ಪರಾರಿಯಾಗಿರುವ ಕೈದಿಗಳ ಬಂಧನಕ್ಕೆ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.



