ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ವ್ಯಾಪಕ ಭ್ರಷ್ಟಾಚಾರ, ಪಕ್ಷ ಸಂಘಟನೆಗೆ ರಾಜ್ಯದಾದ್ಯಂತ ಪ್ರವಾಸ: ವಿಜಯೇಂದ್ರ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜಕೀಯ ರಾಜ್ಯ ಶಿರಸಿ

Spread the love

ಬೆಳ್ತಂಗಡಿ: ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನ ಪ್ರಕರಣದ ಕುರಿತು ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಳ್ಳಿಹಾಕಿದ್ದು, ಈ ಬೆಳವಣಿಗೆಯೊಂದಿಗೆ ತಮ್ಮ ಯಾವುದೇ ಸಂಬಂಧ ಇಲ್ಲ. ಪಕ್ಷದ ವಿರುದ್ಧ ನಡೆದುಕೊಳ್ಳುವ ಅಥವಾ ದ್ರೋಹ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

<

ಧರ್ಮಸ್ಥಳಕ್ಕೆ ಆಗಮಿಸುವ ಮೊದಲು ನಾಲ್ಕು ದಿನಗಳ ಕಾಲ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದೇನೆ. ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನದಿಂದ ಪಕ್ಷದ ಕಾರ್ಯಕರ್ತರಲ್ಲಿ ಉಂಟಾಗಿರುವ ಅಸಮಾಧಾನ ಸಹಜ ಎಂದರು.

ಈ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ತಮಗೂ ವೈಯಕ್ತಿಕವಾಗಿ ನೋವುಂಟು ಮಾಡಿದೆ ಎಂದು ಅವರು ಹೇಳಿದರು. ಧರ್ಮಸ್ಥಳದಲ್ಲಿ ಸತ್ಯಾಸತ್ಯತೆ ಬಹಿರಂಗಪಡಿಸುವ ಕುರಿತು ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದರೂ, ಪಕ್ಷದ ಹಿರಿಯ ನಾಯಕರು ಅದನ್ನು ಮುಂದುವರಿಸದಂತೆ ಸಲಹೆ ನೀಡಿದ್ದರಿಂದ ಆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶ್ವಾಸದಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಲಭಿಸಿದ್ದು, ಆ ವಿಶ್ವಾಸಕ್ಕೆ ಧಕ್ಕೆ ತರುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ ಎಂದರು.

ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಕೆಲವು ಹೆಸರುಗಳನ್ನು ಮುಂದಿಟ್ಟು ಬಿಜೆಪಿ ಶಾಸಕರ ಕುರಿತು ಅನುಮಾನ ಹುಟ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಸತ್ಯ ಶೀಘ್ರದಲ್ಲೇ ಹೊರಬೀಳಲಿದೆ. ಈ ಸಂಬಂಧದ ಎಲ್ಲಾ ಮಾಹಿತಿಯೂ ಪಕ್ಷದ ಕೇಂದ್ರ ನಾಯಕತ್ವದ ಗಮನದಲ್ಲಿದ್ದು, ತಮ್ಮ ಕೈಗೆ ಯಾವುದೇ ತನಿಖಾ ವರದಿ ಬಂದಿಲ್ಲ ಎಂದರು.

ಕೆಲ ಬಿಜೆಪಿ ಶಾಸಕರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ಅಭಿಪ್ರಾಯವನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಮತ್ತಷ್ಟು ಬಲ ತುಂಬುವ ಕೆಲಸ ಮಾಡಲಾಗುವುದು. ಕಾರ್ಯಕರ್ತರ ಬೆಂಬಲವೇ ಪಕ್ಷದ ಶಕ್ತಿಯಾಗಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ಸಂಘಟಿಸಿ ಮುಂದಿನ ದಿನಗಳಲ್ಲಿ ಜನರ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಬರಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿಡದಿ ಭೂಸ್ವಾಧೀನ ವಿಚಾರದಲ್ಲಿ ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ವಿಜಯೇಂದ್ರ ಹೇಳಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ಮತದಾರರ ಪಟ್ಟಿಗೆ ಅಕ್ರಮವಾಗಿ ಹೆಸರು ಸೇರ್ಪಡೆ ಪ್ರಕರಣದಲ್ಲೂ ಕಾಂಗ್ರೆಸ್ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದರು.

ಶಾಸಕರಾದ ಹರೀಶ್ ಪೂಂಜ, ಯಶಪಾಲ್ ಸುವರ್ಣ, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್ ಪುತ್ತೂರು, ಡಾ. ಭರತ್ ಶೆಟ್ಟಿ, ಸಂಸದ ಕ್ಯಾ. ಬ್ರಿಜೇಶ್ ಚೌಟ ಸೇರಿದಂತೆ ಕರಾವಳಿ ಭಾಗದ ಬಿಜೆಪಿ ಶಾಸಕರು ಹಾಗೂ ಪಕ್ಷದ ಪ್ರಮುಖ ನಾಯಕರು ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *