ಮಂಗಳೂರು: ಬಾಂಗ್ಲಾದೇಶಿ ವಲಸಿಗರ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ, ಕೇಂದ್ರ ಹಾಗೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮೊದಲು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಬಾಂಗ್ಲಾದೇಶಿ ವಲಸಿಗರನ್ನು ಹೊರಹಾಕುವುದಾಗಿ ಬಿಜೆಪಿ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದ ಎರಡು ತಿಂಗಳಾದರೂ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಅಸ್ಸಾಂ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಎಷ್ಟು ಮಂದಿಯನ್ನು ದೇಶದಿಂದ ಹೊರಹಾಕಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ 10 ವರ್ಷಗಳ ಆಡಳಿತದಲ್ಲಿ 83 ಸಾವಿರ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಿ ಹೊರಹಾಕಲಾಗಿತ್ತು. ಆದರೆ 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ 8 ಸಾವಿರ ಮಂದಿಯನ್ನು ಮಾತ್ರ ಹೊರಹಾಕಿದೆ ಎಂದು ಆರೋಪಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಕ್ಯಾ. ಬ್ರಿಜೇಶ್ ಚೌಟ ಈ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕು ಎಂದರು.
ಬಾಂಗ್ಲಾದೇಶಿ ವಲಸಿಗರ ಹೆಸರಿನಲ್ಲಿ ಮುಸ್ಲಿಮರು ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ರಾಜಕೀಯ ಮಾಡಲಾಗುತ್ತಿದೆ. ಗಡಿ ಭದ್ರತೆ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದು, ನುಸುಳುಕೋರರನ್ನು ತಡೆಯುವಲ್ಲಿ ವಿಫಲವಾದ ಬಿಜೆಪಿ ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದೆ. ಎಸ್ಐಆರ್ ಪ್ರಕ್ರಿಯೆಗೆ ಕಾಂಗ್ರೆಸ್ ಕೆಲವು ಆಕ್ಷೇಪಗಳನ್ನು ಹೊಂದಿದ್ದರೂ, ನೈಜ ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿಯದಂತೆ ರಾಜ್ಯದಾದ್ಯಂತ ಬಿಎಲ್ಎ–2ಗಳನ್ನು ನೇಮಕ ಮಾಡಿ ಜನರಿಗೆ ಸಹಕಾರ ನೀಡಲಾಗುತ್ತಿದೆ ಎಂದರು. ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಅಗತ್ಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಒದಗಿಸಿದ್ದು, ಅಧಿಕಾರಿಗಳ ಮೇಲೆಯೇ ಬಿಜೆಪಿ ಅನುಮಾನ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿದರು.
ಖಾಯಂ ವಾಸಸ್ಥಳ ಪ್ರಮಾಣಪತ್ರ (ಪಿಆರ್ಸಿ) ವಿತರಣೆಯಲ್ಲಿ ಯಾವುದೇ ಹೊಸ ನಿಯಮ ಜಾರಿಯಾಗಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ. ಪಿಆರ್ಸಿ ಮೂಲಕ ಬಾಂಗ್ಲಾದೇಶಿಯರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂಬ ಆರೋಪವನ್ನು ಬಿಜೆಪಿ ಸಾಬೀತುಪಡಿಸಬೇಕು ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಮುಖಂಡರಾದ ಅಪ್ಪಿ, ಶಶಿಧರ ಹೆಗ್ಡೆ, ಭಾಸ್ಕರ ಮೊಯ್ಲಿ, ನಾಗೇಂದ್ರ ಕುಮಾರ್, ಭಾಸ್ಕರ ರಾವ್, ಸತೀಶ್ ಪೆಂಗಲ್, ಜೇಮ್ಸ್ ಪ್ರವೀಣ್, ಆಲ್ಟನ್ ಡಿಕುನ್ಹಾ, ಇಮ್ರಾನ್, ಮನೀಶ್ ಬೋಳಾರ್ ಹಾಗೂ ಮನೋಜ್ ಎಂ.ಪಿ. ಇದ್ದರು.
ಮಂಗಳೂರಿನಲ್ಲಿ ಅಕ್ರಮ ನುಸುಳುಕೋರರ ಪತ್ತೆ ಮಾಡಿದ್ದು ನಾವು: ಐವನ್ ಡಿಸೋಜ
ಸುರತ್ಕಲ್ನಲ್ಲಿ, ಮಂಗಳೂರಿನಲ್ಲಿ ಬಾಂಗ್ಲಾದೇಶಿಯರ ಪತ್ತೆಯಲ್ಲಿ ನಮ್ಮ ಸರಕಾರ ಕೆಲಸ ಮಾಡಿದೆ. ಬಾಂಗ್ಲಾ ದೇಶಿಯರಿಗೆ ನಾವು ರಕ್ಷಣೆ ಮಾಡಿದ್ದೇವೆಂಬ ಆರೋಪದ ಬಗ್ಗೆ ಒಂದು ಉದಾಹರಣೆ ತೋರಿಸಿ. ಬಾಂಗ್ಲಾದೇಶಿಯರನ್ನು ನಮ್ಮ ದೇಶಕ್ಕೆ ತಂದು ಅವರನ್ನು ಎಸ್ಐಆರ್ನಲ್ಲಿ ಸೇರಿಸಿ ಅವರಿಗೆ ಮತದಾನದ ಹಕ್ಕು ನೀಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಬಿಜೆಪಿ ಆರೋಪ ಸುಳ್ಳು. ಅಂತಹ ಯಾವುದೇ ಪ್ರಕ್ರಿಯೆಯನ್ನು ಕಾಂಗ್ರೆಸ್ ಮಾಡುವುದಿಲ್ಲ. ಇಂತಹ ಆರೋಪಗಳು ಕೇವಲ ರಾಜಕೀಯ ಪ್ರೇರಿತ. ಕಾಂಗ್ರೆಸ್ ಬಾಂಗ್ಲಾದೇಶಿಯರಿಗೆ ರಕ್ಷಣೆ ನೀಡುತ್ತದೆ ಎಂಬ ಷಡ್ಯಂತ್ರದ ಮೂಲಕವೇ ಐದು ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಎಸ್ಐಆರ್ನಲ್ಲಿ ಅವ್ಯವಹಾರ ನಡೆಸಿ ಬಿಜೆಪಿ ಗೆದ್ದಿದೆ ಎಂದು ಐವನ್ ಡಿಸೋಜ ಆರೋಪಿಸಿದರು.
What do you feel about this post?
Like
Love
Happy
Haha
Sad



