ಮಂಗಳೂರು: ಕೇಂದ್ರ ಚುನಾವಣಾ ಆಯೋಗ ಜಾರಿಗೊಳಿಸಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಹಲವು ಲೋಪದೋಷಗಳಿದ್ದು, ಇದರಿಂದ ಮತದಾರರು ಹಾಗೂ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲ ಘಟಕದ ಅಧ್ಯಕ್ಷ ಅಶ್ರಫ್ ಅಡ್ಡೂರು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಎಸ್‌ಐಆರ್ ಪ್ರಕ್ರಿಯೆಯನ್ನು ಮೊದಲಿಗೆ ಬಿಹಾರದಲ್ಲಿ ಜಾರಿಗೆ ತರಲಾಗಿದ್ದು, ಅಲ್ಲಿ ಉಂಟಾದ ಗೊಂದಲಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿತ್ತು. ನಂತರ ಕರ್ನಾಟಕ ಸೇರಿದಂತೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಆರಂಭಿಸಲಾಗಿದ್ದು, ಜೂನ್ 29ರಿಂದ ಬಿಎಲ್‌ಒಗಳ ಮೂಲಕ ಎನ್ಯುಮರೇಷನ್ ಫಾರ್ಮ್‌ಗಳ ವಿತರಣೆ ನಡೆಯುತ್ತಿದೆ ಎಂದು ಹೇಳಿದರು.
ಬಿಎಲ್‌ಒಗಳಿಗೆ ಸಮರ್ಪಕ ತರಬೇತಿ ನೀಡದೆ ಅಲ್ಪಾವಧಿಯ ತರಬೇತಿಯಲ್ಲೇ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮೂಡಿಸದೇ ಫಾರ್ಮ್‌ಗಳನ್ನು ವಿತರಿಸಿರುವುದರಿಂದ ದಾಖಲೆಗಳ ಸಲ್ಲಿಕೆ ಹಾಗೂ ಫಾರ್ಮ್ ಭರ್ತಿಯಲ್ಲಿ ಮತದಾರರು ಗೊಂದಲ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಗತ್ಯ ಪ್ರಮಾಣದಲ್ಲಿ ಫಾರ್ಮ್‌ಗಳು ಲಭ್ಯವಿಲ್ಲದಿರುವುದು ಹಾಗೂ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಒಗಳಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿರುವುದರಿಂದ ಅವರ ಮೂಲ ಕರ್ತವ್ಯಗಳಿಗೂ ತೊಂದರೆಯಾಗಿದೆ. ಶಾಲಾ ಶಿಕ್ಷಕರು ಪಾಠ ಮುಗಿದ ಬಳಿಕ ಮನೆಮನೆಗೆ ತೆರಳಿ ಫಾರ್ಮ್ ವಿತರಣೆ ಮತ್ತು ಸಂಗ್ರಹ ಕಾರ್ಯ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಎಸ್‌ಐಆರ್ ಕರ್ತವ್ಯದ ವೇಳೆ ಕೆಲ ಬಿಎಲ್‌ಒಗಳು ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಕೆಲಸದ ಒತ್ತಡ ಹೆಚ್ಚಾಗಿದೆ. ಕರ್ತವ್ಯ ನಿರ್ಲಕ್ಷಿಸಿದರೆ ಎಫ್‌ಐಆರ್ ದಾಖಲಿಸುವ ಎಚ್ಚರಿಕೆಯೂ ಅಧಿಕಾರಿಗಳಿಂದ ನೀಡಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳಿಂದ ಎಸ್‌ಐಆರ್ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಅನುಷ್ಠಾನದ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ ಎಂದು ಅಶ್ರಫ್ ಅಡ್ಡೂರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಮಂಗಳೂರು ನಗರ ಉಪಾಧ್ಯಕ್ಷ ಅಬ್ದುಲ್ ಹಸೀನ್ ಹಾಗೂ ಸಮಿತಿ ಸದಸ್ಯ ಅಕ್ಬರ್ ಇದ್ದರು.
What do you feel about this post?
Like
Love
Happy
Haha
Sad



