ಮಂಗಳೂರು: ನಗರದ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳ ಜತೆಗೆ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸುಸಜ್ಜಿತ ಮಾರ್ಪಡಿತ ವಿಡಿಯೋ ಕಾನ್ಫರೆನ್ಸ್ ಹಾಲ್ ಹಾಗೂ ಆಧುನೀಕೃತ ಸಭಾಗೃಹ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗಿದೆ.
ಈ ವಿಡಿಯೋ ಕಾನ್ಫರೆನ್ಸ್ ಹಾಲ್‌ನ್ನು ಈ ಹಿಂದೆ ಲಯನ್ಸ್ ಕ್ಲಬ್ ಇಂಟರ್ನೇಶನಲ್ ಸಂಸ್ಥೆಯ ಸಹಕಾರದೊಂದಿಗೆ, ಅಂದಿನ ಲಯನ್ಸ್ ಗವರ್ನರ್ ವಸಂತ್ ಶೆಟ್ಟಿ ಅವರ ಅನುದಾನದ ಮೂಲಕ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಗಿತ್ತು. ಇದೀಗ ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳ ಅಳವಡಿಕೆಯಿಂದ ಸಭಾಂಗಣವು ಇನ್ನಷ್ಟು ಆಕರ್ಷಕ ಹಾಗೂ ಉಪಯುಕ್ತ ರೂಪ ಪಡೆದುಕೊಂಡಿದೆ.

ಸಭಾಂಗಣದಲ್ಲಿ ಉನ್ನತ ಮಟ್ಟದ ಸಭೆಗಳನ್ನು ನಡೆಸಲು ಅನುಕೂಲವಾಗುವಂತೆ ಸುಮಾರು 13 ಮೈಕ್ರೋಫೋನ್‌ಗಳು, ಉತ್ತಮ ಗುಣಮಟ್ಟದ ಧ್ವನಿ ವರ್ಧಕ ವ್ಯವಸ್ಥೆ ಹಾಗೂ ಇತರ ಪೂರಕ ಉಪಕರಣಗಳನ್ನು ಅಳವಡಿಸಲಾಗಿದೆ. ಸುಮಾರು ₹2.5 ಲಕ್ಷ ವೆಚ್ಚದ ಈ ಉಪಕರಣಗಳನ್ನು ವಿವಿಧ ದಾನಿಗಳ ಸಹಕಾರದಿಂದ ಒದಗಿಸಲಾಗಿದೆ.
ಒಂದೇ ವೇಳೆ ಸುಮಾರು 50 ಮಂದಿ ಆಸೀನರಾಗುವ ವ್ಯವಸ್ಥೆಯೊಂದಿಗೆ ಸಜ್ಜುಗೊಂಡಿರುವ ಈ ಸಭಾಂಗಣದಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳು, ನಿರಂತರ ವೈದ್ಯಕೀಯ ಶಿಕ್ಷಣ (ಸಿಎಮ್‌ಇ) ಕಾರ್ಯಾಗಾರಗಳು, ತರಬೇತಿ ಶಿಬಿರಗಳು ಹಾಗೂ ವಿವಿಧ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಬಹುದಾಗಿದೆ. ಜೊತೆಗೆ, ಪವರ್‌ಪಾಯಿಂಟ್ ಪ್ರಸ್ತುತೀಕರಣ ವ್ಯವಸ್ಥೆಯೂ ಅಳವಡಿಸಲಾಗಿದ್ದು, ಆಸ್ಪತ್ರೆಯ ಕಾರ್ಯಚಟುವಟಿಕೆಗಳಿಗೆ ಹೊಸ ಮೆರುಗು ತಂದಿದೆ.
ಆಧುನಿಕ ಸಂವಹನ ಹಾಗೂ ತಾಂತ್ರಿಕ ಸೌಲಭ್ಯಗಳ ಸೇರ್ಪಡೆ ಸರಕಾರಿ ಆಸ್ಪತ್ರೆಗಳ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದ್ದು, ಸಮಾಜಮುಖಿ ಆರೋಗ್ಯ ಸೇವೆಗಳ ವಿಸ್ತರಣೆಗೆ ನೆರವಾಗಲಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕರು ಹಾಗೂ ದಾನಿಗಳ ಸಹಭಾಗಿತ್ವವು ಮುಂದುವರಿದರೆ ಆರೋಗ್ಯವಂತ ಸಮಾಜ ನಿರ್ಮಾಣದ ಸರಕಾರದ ಆಶಯ ಸಾಕಾರಗೊಳ್ಳಲು ಹೆಚ್ಚಿನ ಬಲ ಸಿಗಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
What do you feel about this post?
Like
Love
Happy
Haha
Sad



