ತಲಪಾಡಿ: ಇಲ್ಲಿನ ದೇವಿನಗರದ ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮತ್ತು ಯಶಸ್ಸಿನ ಮನೋಭಾವ ಬೆಳೆಸುವ ಉದ್ದೇಶದಿಂದ ಗೆಲುವಿನ ಗುಟ್ಟು ವಿಷಯದಡಿ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ನಾಡಿನ ಖ್ಯಾತ ಉಪನ್ಯಾಸಕ, ಯಕ್ಷಗಾನದ ಮೇರು ಅರ್ಥದಾರಿ, ಕವಿ ಹಾಗೂ ಪ್ರಸಂಗಕರ್ತ ಪ್ರೊ. ಪವನ್ ಕಿರಣ ಕೆರೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಗುರಿ, ಆತ್ಮವಿಶ್ವಾಸ, ನಿರಂತರ ಪರಿಶ್ರಮ ಮತ್ತು ಸಮಯದ ಸದ್ಬಳಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ತಿಳಿಸಿದರು. ಗೆಲುವಿನ ಗುಟ್ಟನ್ನು ಅರಿತು ದೃಢ ಸಂಕಲ್ಪದೊಂದಿಗೆ ಮುನ್ನಡೆಯುವಂತೆ ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕೌಶಲ, ಶಿಸ್ತು ಮತ್ತು ಮೌಲ್ಯಾಧಾರಿತ ಶಿಕ್ಷಣ ಬೆಳೆದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಸಮೀರ್ ಪುರಾಣಿಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಂಡು ನಿರಂತರ ಶ್ರಮಿಸುವಂತೆ ಹುರಿದುಂಬಿಸಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿಹಾನ್ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಸುರೇಶ್ ರಾವ್ ಅತ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲ ಸುರೇಶ್ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ವೃಂದದವರು ಭಾಗವಹಿಸಿದ್ದರು.
What do you feel about this post?
Like
Love
Happy
Haha
Sad





