ಕುಂದಾಪುರ: ಕಂಡ್ಲೂರಿನ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎ. ಜಯಕರ ಶೆಟ್ಟಿ ಅವರ ಬೀಳ್ಕೊಡುಗೆ ಸಮಾರಂಭವು ವಿಭಿನ್ನ ಸಂದೇಶದೊಂದಿಗೆ ನಡೆಯಿತು. ತಮ್ಮನ್ನು ಹಾರ-ತುರಾಯಿಗಳಿಂದ ಸನ್ಮಾನಿಸುವ ಬದಲು ಶಾಲೆಗೆ ಉಪಯುಕ್ತವಾಗುವ ವಸ್ತುಗಳನ್ನು ನೀಡುವಂತೆ ಅವರು ಮನವಿ ಮಾಡಿದ್ದು, ಅದಕ್ಕೆ ಸ್ಪಂದಿಸಿದ ಆಡಳಿತ ಮಂಡಳಿ, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಶಾಲೆಗೆ ಅಗತ್ಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.
ಸುದೀರ್ಘ ಅವಧಿಯವರೆಗೆ ಕ್ರೀಡಾ ಶಿಕ್ಷಕರಾಗಿ ಹಾಗೂ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಯಕರ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಾತನಾಡಿದ ಅವರು, ಶಾಲೆಯ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿರುವ ತೃಪ್ತಿ ಇದ್ದು, ತಮ್ಮ ಬೀಳ್ಕೊಡುಗೆ ನೆನಪಿಗಾಗಿ ಶಾಲೆಗೆ ಉಪಯೋಗವಾಗುವ ವಸ್ತುಗಳನ್ನು ನೀಡುವಂತೆ ಆಡಳಿತ ಮಂಡಳಿ, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಬಂಧು-ಮಿತ್ರರಿಗೆ ಮನವಿ ಮಾಡಿದರು.
ಅವರ ಮನವಿಗೆ ಸ್ಪಂದಿಸಿದ ಆಡಳಿತ ಮಂಡಳಿ ಅಧ್ಯಕ್ಷ ಸೌಕೂರು ಸುಭಾಶ್ಚಂದ್ರ ಶೆಟ್ಟಿ ಅವರು ಶಾಲೆಗೆ ಅಗ್ನಿಶಾಮಕ ಸಿಲಿಂಡರ್ ಕೊಡುಗೆಯಾಗಿ ನೀಡಿದರು. ಪೋಷಕರು ಮತ್ತೊಂದು ಅಗ್ನಿಶಾಮಕ ಸಿಲಿಂಡರ್ ಹಾಗೂ ಹಳೆ ವಿದ್ಯಾರ್ಥಿಗಳು ವಿವಿಧ ಕಲಿಕಾ ಸಾಮಗ್ರಿಗಳನ್ನು ಶಾಲೆಗೆ ಹಸ್ತಾಂತರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸೌಕೂರು ಸುಭಾಶ್ಚಂದ್ರ ಶೆಟ್ಟಿ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಮಡಿವಾಳ, ಭಾರತಿ ಜಯಕರ ಶೆಟ್ಟಿ ಹಾಗೂ ದೇವಿಜಾ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಆನಂದ ಕುಲಾಲ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಕರುಣಾಕರ ಸೇರೆಗಾರ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕಿ ಹೆಚ್. ಸುಲೋಚನಾ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ವೈ. ಪ್ರಕಾಶ ಶೆಟ್ಟಿ ಹಾಗೂ ನಿವೃತ್ತ ಶಿಕ್ಷಕ ರಮೇಶ್ ಜಿ. ಲಮಾಣಿ ಶುಭ ಹಾರೈಸಿದರು.
ಗೌರವ ಶಿಕ್ಷಕಿ ಸುಜಾತಾ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಪ್ರಕಾಶ್ ಜಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂಡ್ಲೂರು ರಾಮ್‌ಸನ್ ಪ್ರೌಢಶಾಲೆಯ ಸಹ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಶ್ರೇಯಾ ವಂದಿಸಿದರು.
What do you feel about this post?
Like
Love
Happy
Haha
Sad





