ಸುಬ್ರಮಣ್ಯ: ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿ ಸ್ಥಗಿತಗೊಂಡಿದ್ದ ಮೈಸೂರು ವಿಭಾಗದ ಶಿರಿಬಾಗಿಲು–ಎಡಕುಮಾರಿ ನಡುವಿನ ಶಿರಾಡಿ ಘಾಟ್ ರೈಲು ಮಾರ್ಗದಲ್ಲಿ ರೈಲು ಸಂಚಾರವನ್ನು ದಕ್ಷಿಣ ಪಶ್ಚಿಮ ರೈಲ್ವೆ ಮರು ಆರಂಭಿಸಿದೆ. ಹಳಿ ಮೇಲಿನ ಮಣ್ಣು, ಕಲ್ಲು ಹಾಗೂ ಮರಗಳ ಅವಶೇಷಗಳನ್ನು ತೆರವುಗೊಳಿಸಿ ಸುರಕ್ಷತಾ ಪರಿಶೀಲನೆ ಪೂರ್ಣಗೊಳಿಸಿದ ಬಳಿಕ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ರೈಲ್ವೆ ಇಲಾಖೆ ಪ್ರಕಟಣೆಯ ಪ್ರಕಾರ, ಆಗಸ್ಟ್ 3ರಂದು ಸಂಜೆ 7.25ಕ್ಕೆ ಹಳಿ ಸುರಕ್ಷತಾ ತಪಾಸಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ತಾಂತ್ರಿಕ ತಜ್ಞರು ಮಾರ್ಗವನ್ನು ಸುರಕ್ಷಿತ ಎಂದು ಪ್ರಮಾಣೀಕರಿಸಿದ ಬಳಿಕ ರೈಲು ಸಂಚಾರಕ್ಕೆ ಹಸಿರು ನಿಶಾನೆ ನೀಡಲಾಯಿತು. ನಂತರ 17378 ಸಂಖ್ಯೆಯ ರೈಲು ಈ ವಿಭಾಗದಲ್ಲಿ ಸುರಕ್ಷಿತವಾಗಿ ಸಂಚರಿಸುವ ಮೂಲಕ ಕಾರ್ಯಾಚರಣೆ ಪುನರಾರಂಭಗೊಂಡಿದೆ.
ಸುರಕ್ಷತೆಯ ದೃಷ್ಟಿಯಿಂದ ಭೂಕುಸಿತ ಸಂಭವಿಸಿದ್ದ ಪ್ರದೇಶದಲ್ಲಿ ತಾತ್ಕಾಲಿಕವಾಗಿ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 10 ಕಿಲೋಮೀಟರ್‌ಗೆ ಮಿತಿಗೊಳಿಸಲಾಗಿದೆ. ಲೋಕೋಪೈಲೆಟ್‌ಗಳು ಹಾಗೂ ಇತರ ಸಿಬ್ಬಂದಿಗೆ ಹೆಚ್ಚಿನ ಎಚ್ಚರಿಕೆಯಿಂದ ರೈಲು ಸಂಚಾರ ನಡೆಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ.
ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಶಾಶ್ವತ ಪುನಃಸ್ಥಾಪನಾ ಕಾಮಗಾರಿ ಮುಂದುವರಿದಿದ್ದು, ತಜ್ಞರ ತಂಡ ಸ್ಥಳದಲ್ಲೇ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದೆ. ಮಳೆಯ ಸ್ಥಿತಿಗತಿಗಳನ್ನು ಆಧರಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಕಳೆದ ಮೂರು ದಿನಗಳಿಂದ ಶಿರಾಡಿ ಘಾಟ್ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಕರಾವಳಿ ಕರ್ನಾಟಕ–ಬೆಂಗಳೂರು ನಡುವಿನ ಹಲವು ರೈಲುಗಳು ರದ್ದಾಗಿದ್ದವು ಅಥವಾ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿದ್ದವು. ಇದರಿಂದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು.
ಮಾರ್ಗ ಪುನರಾರಂಭಗೊಂಡಿರುವುದರಿಂದ ಪ್ರಯಾಣಿಕರಿಗೆ ನೆಮ್ಮದಿ ಸಿಕ್ಕಿದ್ದು, ಸುರಕ್ಷತಾ ಕ್ರಮಗಳ ಕಾರಣ ಆರಂಭಿಕ ದಿನಗಳಲ್ಲಿ ಕೆಲವು ರೈಲುಗಳು ವಿಳಂಬವಾಗಿ ಸಂಚರಿಸುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ಮುಂಚಿತವಾಗಿ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
What do you feel about this post?
Like
Love
Happy
Haha
Sad





