ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭರತ್ ಮುಂಡೋಡಿ ಸೂಚನೆ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ

Spread the love

ಮಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ತಾಂತ್ರಿಕ ದೋಷದಿಂದ ಜೀವಂತ ಫಲಾನುಭವಿಗಳನ್ನೇ ಮೃತರೆಂದು ದಾಖಲಿಸುವ ಪ್ರಕರಣಗಳು ವರದಿಯಾಗುತ್ತಿದ್ದು, ಹಲವು ತಿಂಗಳು ಕಳೆದರೂ ಸಮಸ್ಯೆ ಬಗೆಹರಿಯದಿರುವುದನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೃತ ಫಲಾನುಭವಿಗಳ ಮಾಹಿತಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನಿಖರವಾಗಿ ಪರಿಶೀಲಿಸಿ, ಅವರ ಖಾತೆಗೆ ಜಮೆಯಾಗಿರುವ ಹಣವನ್ನು ಸರ್ಕಾರಕ್ಕೆ ಮರುಜಮೆ ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ನಿರ್ದೇಶಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್ ಮಾಹಿತಿ ನೀಡಿ, ಗೃಹಲಕ್ಷ್ಮಿ ಯೋಜನೆಯಡಿ ಜೂನ್ 6ರಿಂದ ಜುಲೈ 9ರವರೆಗೆ 278 ಹೊಸ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 3,82,922 ಫಲಾನುಭವಿಗಳಿದ್ದಾರೆ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆಯ ಮರುಪರಿಶೀಲನಾ ಸಮೀಕ್ಷೆ ನಡೆಯುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜಾಲತಾಣ ಸಮಸ್ಯೆಯಿಂದ ಮಾಹಿತಿ ಸಂಗ್ರಹಕ್ಕೆ ಅಡಚಣೆ ಉಂಟಾಗುತ್ತಿದೆ. ಗ್ರಾಮ ಪಂಚಾಯತ್ ಕಚೇರಿಗಳ ಸಭಾಂಗಣಗಳಲ್ಲಿ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸುವಂತೆ ಪಂಚಾಯತ್‌ಗಳಿಗೆ ಸೂಚನೆ ನೀಡಬೇಕು ಎಂದರು.

ಸಭೆಯಲ್ಲಿ ಕಡಬ ತಾಲೂಕಿನ ನೆಲ್ಯಾಡಿ ಬಸ್ ನಿಲ್ದಾಣಕ್ಕೆ ಬಸ್ ಸಂಚಾರ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಪ್ರಸ್ತಾಪಿಸಲಾಯಿತು. ಈ ಬಗ್ಗೆ ಸಂಬಂಧಿತ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಪಡಿತರ ವಿತರಣೆಯ ಸಂದರ್ಭದಲ್ಲಿ ಆಹಾರ ನಿರೀಕ್ಷಕರು ನ್ಯಾಯಬೆಲೆ ಅಂಗಡಿಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುವುದು ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಯುವನಿಧಿ ಯೋಜನೆಯಡಿ ಎರಡು ವರ್ಷಗಳಿಂದ ಸಹಾಯಧನ ಪಡೆಯುತ್ತಿರುವ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಭರತ್ ಮುಂಡೋಡಿ ಸೂಚಿಸಿದರು. ಜಿಲ್ಲೆಯಲ್ಲಿ ಈ ಯೋಜನೆಯಡಿ 7,960 ಮಂದಿ ನೋಂದಾಯಿಸಿಕೊಂಡಿದ್ದು, 7,032 ಮಂದಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಸಹಾಯಧನ ಪಾವತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಭಾರಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಜೋಕಿಂ ಡಿಸೋಜ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಇದ್ದರು.

Leave a Reply

Your email address will not be published. Required fields are marked *