ಮಂಗಳೂರು: ಗುರಿ ಸಾಧನೆ (ಟಾರ್ಗೆಟ್) ಹೆಸರಿನಲ್ಲಿ ಅಂಚೆ ಸಿಬ್ಬಂದಿಗೆ ಮಾನಸಿಕ ಒತ್ತಡ ಹೇರಿ, ಸ್ವಂತ ಹಣದಲ್ಲಿ ವಿವಿಧ ಖಾತೆಗಳನ್ನು ತೆರೆಯುವಂತೆ ಒತ್ತಾಯಿಸಲಾಗುತ್ತಿದೆ. ಜೊತೆಗೆ ಅಂಚೆ ಇಲಾಖೆಯನ್ನು ಖಾಸಗೀಕರಣದತ್ತ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಭಾರತೀಯ ಅಂಚೆ ನೌಕರರ ಸಂಘ, ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಷ್ಟ್ರವ್ಯಾಪಿ ಹೋರಾಟ ಹಾಗೂ ಮುಷ್ಕರ ನಡೆಸುವುದಾಗಿ ಸಂಘದ ಪದಾಧಿಕಾರಿ ದಯಾನಂದ ಕತ್ತಲ್ ಸಾರ್ ಅವರು ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
170 ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಅಂಚೆ ಇಲಾಖೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿಶ್ವಾಸಾರ್ಹ ಸೇವೆ ನೀಡುತ್ತ ಬಂದಿದೆ. ಆದರೆ ಇಲಾಖೆಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಸರ್ಕಾರ ಅವೈಜ್ಞಾನಿಕ ನೀತಿಗಳನ್ನು ಜಾರಿಗೊಳಿಸುತ್ತಿದ್ದು, ಸಿಬ್ಬಂದಿ ನಿರಂತರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದರು.
ಪ್ರತಿ ತಿಂಗಳು ಅವೈಜ್ಞಾನಿಕ ಗುರಿಗಳನ್ನು ನಿಗದಿಪಡಿಸಿ, ಅವುಗಳನ್ನು ಕಡ್ಡಾಯವಾಗಿ ಪೂರೈಸುವಂತೆ ಸಿಬ್ಬಂದಿಗೆ ಒತ್ತಡ ಹೇರಲಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಸಿಬ್ಬಂದಿಯೇ ತಮ್ಮ ಸ್ವಂತ ಹಣದಿಂದ ಉಳಿತಾಯ ಖಾತೆಗಳನ್ನು ತೆರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಶೋಷಣೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳ ಈಡೇರಿಕೆಗೆ ಜುಲೈ 20ರಿಂದ 27ರವರೆಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ, ಜುಲೈ 28ರಂದು ಮಧ್ಯಾಹ್ನದ ಊಟದ ವಿರಾಮದ ವೇಳೆ ವಿಭಾಗೀಯ ಕಚೇರಿಗಳ ಎದುರು ಪ್ರತಿಭಟನೆ, ಆಗಸ್ಟ್ 5ರಂದು ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ ಹಾಗೂ ಆಗಸ್ಟ್ 18 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.
ಸಂಘದ ವಲಯ ಕಾರ್ಯದರ್ಶಿ ವೀರೇಶ್ ಅವರು ಮಾತನಾಡಿ, ಗ್ರಾಮೀಣ ಅಂಚೆ ಸೇವಕರ ಮೇಲಿನ ಟಾರ್ಗೆಟ್ ಒತ್ತಡವನ್ನು ನಿಲ್ಲಿಸುವುದು, ಸಿಬ್ಬಂದಿಯಿಂದ ಸ್ವಂತ ಹಣದಲ್ಲಿ ಖಾತೆ ತೆರೆಯುವಂತೆ ಒತ್ತಾಯಿಸುವ ಕ್ರಮವನ್ನು ರದ್ದುಪಡಿಸುವುದು, ರೈಲ್ವೆ ಅಂಚೆ ಸೇವೆಯನ್ನು ಪುನರಾರಂಭಿಸುವುದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರವಿ ಚೌದ್ರಿ, ದೇವಪ್ಪ ಜಿ. ಮ್ಯಾಗೇರಿ, ಸಂತೋಷ್ ಬೂದಿ ಹಾಗೂ ಪ್ರಕಾಶ್ ಕರಡಿ ಇದ್ದರು.



