ಮಂಗಳೂರು: ನಗರದ ಹೊರವಲಯದ ಎಂಆರ್‌ಪಿಎಲ್‌ನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಅವಘಡದ ಬಳಿಕ ನಡೆಸಿದ ಶೋಧ ಕಾರ್ಯದಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬರು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎಂಆರ್ ಪಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ರುಡಾಲ್ಫ್ ನೊರೊನ್ಹಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಘಟಕದಲ್ಲಿ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೀತ ವಿಭಜಕ ಸ್ಫೋಟಗೊಂಡ ಪರಿಣಾಮ ಮಧ್ಯಾಹ್ನ 12.20ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಘಟಕದ ವ್ಯಾಪ್ತಿಯನ್ನು ತಕ್ಷಣ ಪ್ರತ್ಯೇಕಿಸಿ, ಸಂಸ್ಥೆಯ ತುರ್ತು ಪ್ರತಿಕ್ರಿಯಾ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿದ್ದರು ಎಂದು ತಿಳಿಸಿದ್ದಾರೆ.
ಸುಮಾರು ಎರಡು ಗಂಟೆಗಳ ಕಾರ್ಯಾಚರಣೆಯ ಬಳಿಕ ಮಧ್ಯಾಹ್ನ 2.47ರ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಸಂಪೂರ್ಣವಾಗಿ ನಂದಿಸಲಾಯಿತು. ಬಳಿಕ ಘಟನಾ ಸ್ಥಳದಲ್ಲಿ ಪರಿಶೀಲನೆ ಹಾಗೂ ಶೋಧ ಕಾರ್ಯ ನಡೆಸಿದಾಗ ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಅವಘಡದಲ್ಲಿ ಸುಟ್ಟ ಗಾಯಗೊಂಡಿರುವ ಮತ್ತೊಬ್ಬ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ.ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ. ಅವಘಡಕ್ಕೆ ಕಾರಣ ಹಾಗೂ ಇತರ ವಿವರಗಳ ಕುರಿತು ದೃಢೀಕರಿಸಲಾದ ಮಾಹಿತಿಯನ್ನು ಲಭ್ಯವಾದಂತೆ ಹಂಚಿಕೊಳ್ಳಲಾಗುವುದು ಎಂದು ಎಂಆರ್‌ಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
What do you feel about this post?
Like
Love
Happy
Haha
Sad





