ಕಾರವಾರ: ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಗಳನ್ನು ಒಳಗೊಂಡಂತೆ ಅಕ್ಟೋಬರ್ 1ರಂದು ನಡೆಯಲಿರುವ ಅಂತಾರಾಜ್ಯ ಮಟ್ಟದ ಚಂಡಮಾರುತ ವಿಪತ್ತು ನಿರ್ವಹಣೆ ಅಣಕು ಕಾರ್ಯಾಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅಣಕು ಕಾರ್ಯಾಚರಣೆಯ ಪೂರ್ವಸಿದ್ಧತೆ ಹಾಗೂ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಭಾರತ ಸರ್ಕಾರದ ನಿರ್ದೇಶನದಂತೆ ಈ ಅಣಕು ಕಾರ್ಯಾಚರಣೆ ನಡೆಯಲಿದೆ. ಚಂಡಮಾರುತದಂತಹ ವಿಪತ್ತು ಸಂದರ್ಭದಲ್ಲಿ ವಿವಿಧ ರಾಜ್ಯಗಳ ಇಲಾಖೆಗಳು ಒಂದೇ ಸಮನ್ವಯ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವುದು, ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಹಾಗೂ ಸಾರ್ವಜನಿಕರಿಗೆ ತ್ವರಿತವಾಗಿ ತುರ್ತು ನೆರವು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಒಟ್ಟು 24 ಸ್ಥಳಗಳಲ್ಲಿ ಅಣಕು ಕಾರ್ಯಾಚರಣೆ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಗೋಕರ್ಣ ಮತ್ತು ಭಟ್ಕಳದಲ್ಲಿ ಕಾರ್ಯಾಚರಣೆ ನಡೆಯಲಿದೆ.
ಚಂಡಮಾರುತ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ, ಸಾರ್ವಜನಿಕರ ರಕ್ಷಣೆ, ಸ್ಥಳಾಂತರ, ಪುನರ್ವಸತಿ, ಪರಿಹಾರ ಹಾಗೂ ವೈದ್ಯಕೀಯ ನೆರವು ಸೇರಿದಂತೆ ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಅಣಕು ಕಾರ್ಯಾಚರಣೆಯ ಮೂಲಕ ಪರಿಶೀಲಿಸಲಾಗುವುದು. ಇದರಿಂದ ವಿಪತ್ತು ಸಂದರ್ಭದಲ್ಲಿ ಹಾನಿಯ ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ತುರ್ತು ಸ್ಪಂದನಾ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಸಾಧ್ಯವಾಗಲಿದೆ ಎಂದು ಸಾಜಿದ್ ಮುಲ್ಲಾ ಹೇಳಿದರು.
ಕಾರ್ಯಾಚರಣೆ ಕುರಿತು ಮಾಹಿತಿ
ಅಣಕು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಾಚರಣೆ ವಿಭಾಗದ ನಿವೃತ್ತ ಕಮಾಂಡೆಂಟ್ ಆದಿತ್ಯ ಕುಮಾರ್ ಅವರು ಅಂತರ್ಜಾಲದ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಕ್ರಿಮ್ಸ್ ವೈದ್ಯ ಡಾ. ವಿಜಯರಾಜ್, ಡಿವೈಎಸ್ಪಿ ಗಿರೀಶ್, ಅಗ್ನಿಶಾಮಕ ಇಲಾಖೆ, ನೌಕಾಪಡೆ, ರಾಜ್ಯ ವಿಪತ್ತು ಸ್ಪಂದನಾ ಪಡೆ ಹಾಗೂ ವಿವಿಧ ಜಿಲ್ಲಾ ಮಟ್ಟದ ಇಲಾಖೆಗಳ ಅಧಿಕಾರಿಗಳು ಇದ್ದರು.
What do you feel about this post?
Like
Love
Happy
Haha
Sad






