ಕಾರವಾರ: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತ ಎದುರಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿ ಮಧುಕರ್ ಕುರುಮಕರ್ ಅವರ ಪತ್ನಿ ಹಾಗೂ ಸೂರಜ್ ಕುರುಮಕರ್ ಅವರ ತಾಯಿ ಸುಮನ ಕುರುಮಕರ್ (70) ಅವರು ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ.
ದೀಪಾವಳಿ ದಿನ ದೇವಾಳಿವಾಡಾ ಪದ್ಮನಾಭನಗರದಲ್ಲಿ ಇರುವ ಸ್ವಗೃಹದಲ್ಲಿ ಕುಟುಂಬದ ಸದಸ್ಯರು, ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಇದ್ದ ಸುಮನ ಅವರಿಗೆ ಬೆಳಗಿನ ಜಾವ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ವೈದ್ಯರ ಪ್ರಯತ್ನ ಫಲ ನೀಡಲಿಲ್ಲ. ಬೆಳಿಗ್ಗೆ 7.30 ರ ಸುಮಾರಿಗೆ ಕೊನೆಯುಸಿರೆಳೆದರು.
ಮೃತರಿಗೆ ಇಬ್ಬರು ಸಾಮಾಜಿಕ ಕಾರ್ಯಕರ್ತ ಸೂರಜ್ ಕುರುಮಕರ್ ಸೇರಿದಂತೆ ಇಬ್ಬರು ಪುತ್ರರು, ಪುತ್ರಿ, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಇದ್ದಾರೆ.
ಪತಿ ಮಧುಕರ್ ಕುರುಮಕರ್ ಅವರು ನಿವೃತ್ತ ಪೊಲೀಸ್ ಅಧಿಕಾರಿ ಆಗಿದ್ದರು.ಸಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ಪಿಎಸ್ಐ, ಕಾರವಾರ ಜಿಲ್ಲಾ ಅಪರಾಧ ದಾಖಲೆ ವಿಭಾಗದ ಪಿಎಸ್ಐ ಆಗಿ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಕಾರವಾರ ರೈಲ್ವೆ ಪೊಲೀಸ್ ಠಾಣೆ, ಕುಮಟಾ ಹಾಗೂ ಜೊಯಿಡಾದಲ್ಲಿ ಸೇವೆ ಸಲ್ಲಿಸಿ ನಿಷ್ಠಾವಂತ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಅವರು 2019 ರಲ್ಲಿ ನಿಧನರಾಗಿದ್ದರು.
ಕಾರವಾರದ ದಿವೇಕರ್ ಕಾಲೇಜು ಮುಂಭಾಗದ ರುದ್ರಭೂಮಿಯಲ್ಲಿ ಸುಮನ ಕುರುಮಕರ್ ಅವರ ಅಂತ್ಯಕ್ರಿಯೆ ನೆರವೇರಿತು. ನೂರಾರು ಮಂದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಕೊಂಕಣ ಖಾರ್ವಿ ಸಮಾಜದ ಮುಖಂಡರು ಹಾಗೂ ಸ್ಥಳೀಯ ಗಣ್ಯರು ಮನೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.






