ರಾಷ್ಟ್ರಪ್ರಶಸ್ತಿ ವಿಜೇತ ತುಳುನಾಡಿನ ಕಲಾವಿದರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ದೇಶ ವಿದೇಶ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ ಸಿನಿಮಾ

Spread the love

ಮಂಗಳೂರು: 72ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದ ತುಳುನಾಡಿನ ಕಲಾವಿದರು ಹಾಗೂ ಸಾಹಿತಿಗೆ ಬುಧವಾರ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ದೊರೆಯಿತು.

<

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ರಂಗಭೂಮಿ ಕಲಾವಿದೆ ರೂಪಶ್ರೀ ವರ್ಕಾಡಿ, ಬಾಲನಟ ಆತೀಶ್ ಎಸ್. ಶೆಟ್ಟಿ, ‘ಮಿಥ್ಯಾ’ ಚಿತ್ರದ ಬರಹಗಾರ ಹಾಗೂ ನಿರ್ದೇಶಕ ಸುಮಂತ್ ಭಟ್ ಮತ್ತು ಸಿನಿಮಾಧಾರಿತ ಉತ್ತಮ ಪುಸ್ತಕ ವಿಭಾಗದಲ್ಲಿ ಪ್ರಶಸ್ತಿ ಪಡೆದ ಕುಂದಾಪುರ ಮೂಲದ ಡಾ. ಪ್ರದೀಪ್ ಕೆಂಚನೂರು ಅವರು ಬುಧವಾರ ಮಧ್ಯಾಹ್ನ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ಸಂದರ್ಭದಲ್ಲಿ ಆತ್ಮೀಯರು, ಹಿತೈಷಿಗಳು ಹಾಗೂ ಅಭಿಮಾನಿಗಳು ಅವರನ್ನು ಬರಮಾಡಿಕೊಂಡರು.

‘ಮಿಥ್ಯಾ’ ಕನ್ನಡ ಚಿತ್ರವು ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಚಿತ್ರದ ಬರಹಗಾರ ಹಾಗೂ ನಿರ್ದೇಶಕ ಸುಮಂತ್ ಭಟ್, ಬಾಲನಟ ಆತೀಶ್ ಎಸ್. ಶೆಟ್ಟಿ ಹಾಗೂ ಪೋಷಕ ನಟಿ ರೂಪಶ್ರೀ ವರ್ಕಾಡಿ ಅವರು ಮಂಗಳವಾರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು.

ತುಳು ಭಾಷೆಗೆ ಸಂದ ಗೌರವ: ರೂಪಶ್ರೀ

ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡ ರೂಪಶ್ರೀ ವರ್ಕಾಡಿ, ‘ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿಭಾಗದಲ್ಲಿ ತುಳುನಾಡಿನ ಕಲಾವಿದರಿಗೆ ಪ್ರಶಸ್ತಿ ದೊರೆತಿರುವುದು ತುಳು ಭಾಷೆಗೆ ದೊರೆತ ಬಹುದೊಡ್ಡ ಗೌರವ. ಸಿನಿಮಾದಲ್ಲಿ ನಟಿಸುವಾಗ ಇಂತಹ ದೊಡ್ಡ ಪ್ರಶಸ್ತಿ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ತುಳುನಾಡಿನ ಜನರ ಪ್ರೀತಿ, ಹೆತ್ತವರ ಹಾಗೂ ದೈವ–ದೇವರ ಆಶೀರ್ವಾದದಿಂದ ಈ ಮನ್ನಣೆ ದೊರೆತಿದೆ’ ಎಂದರು.

‘ಇದು ನನ್ನ ಜೀವನದ ಅತ್ಯಂತ ಸಂತಸದ ಹಾಗೂ ಎಂದಿಗೂ ಮರೆಯಲಾಗದ ದಿನ. ಮುಂದೆಯೂ ನಟಿಯಾಗಿ ಸಾಮಾಜಿಕ ಕಾಳಜಿಯುಳ್ಳ ಸಿನಿಮಾಗಳಲ್ಲಿ ಹೆಚ್ಚು ನಟಿಸಲು ಪ್ರಯತ್ನಿಸುತ್ತೇನೆ. ಅವಕಾಶ ಕಲ್ಪಿಸಿದ ನಿರ್ದೇಶಕರು, ನಿರ್ಮಾಪಕರು ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಹೇಳಿದರು.

ಜವಾಬ್ದಾರಿ ಹೆಚ್ಚಿದೆ: ಸುಮಂತ್ ಭಟ್

ನಿರ್ದೇಶಕ ಸುಮಂತ್ ಭಟ್ ಮಾತನಾಡಿ, ‘ಈ ಹಿಂದೆ ನಮ್ಮ ಸಂತೋಷಕ್ಕಾಗಿ ಸಿನಿಮಾ ಮಾಡುತ್ತಿದ್ದೆವು. ಆದರೆ ರಾಷ್ಟ್ರಪ್ರಶಸ್ತಿ ದೊರೆತಿರುವುದರಿಂದ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಜನರು ನಮ್ಮ ಸಿನಿಮಾವನ್ನು ನೋಡುತ್ತಾರೆ, ಮೆಚ್ಚುತ್ತಾರೆ ಎಂದಾದರೆ, ಮುಂದಿನ ಸಿನಿಮಾಗಳನ್ನು ಇನ್ನಷ್ಟು ಜವಾಬ್ದಾರಿಯಿಂದ ಹಾಗೂ ಗಮನಕೊಟ್ಟು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿದೆ’ ಎಂದರು.

ಪ್ರಶಸ್ತಿ ನಿರೀಕ್ಷಿಸಿರಲಿಲ್ಲ: ಆತೀಶ್

ಬಾಲನಟ ಆತೀಶ್ ಎಸ್. ಶೆಟ್ಟಿ ಮಾತನಾಡಿ, ‘ರಾಷ್ಟ್ರೀಯ ಪ್ರಶಸ್ತಿ ದೊರೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ‘ಮಿಥ್ಯಾ’ ಚಿತ್ರದಲ್ಲಿ ಅವಕಾಶ ನೀಡಿದ ನಿರ್ದೇಶಕರು ಹಾಗೂ ಸಹಕಲಾವಿದರಿಗೆ ಧನ್ಯವಾದಗಳು. ನನ್ನ ಹೆತ್ತವರು ಮತ್ತು ಕಾಲೇಜಿನ ಆಡಳಿತ ಮಂಡಳಿ ನೀಡಿದ ಪ್ರೋತ್ಸಾಹ ದೊಡ್ಡಮಟ್ಟದಲ್ಲಿದೆ. ಅವರಿಗೆ ಸದಾ ಚಿರಋಣಿಯಾಗಿರುತ್ತೇನೆ’ ಎಂದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

sanotsh

Leave a Reply