ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಮೋಟರೈಸ್ಡ್ ಟಿಎವಿಐ ಚಿಕಿತ್ಸೆ ಯಶಸ್ವಿ : ಇಂಡಿಯಾನಾ ಆಸ್ಪತ್ರೆ ವೈದ್ಯರ ಸಾಧನೆಗೆ ಮತ್ತೊಂದು ಕಿರೀಟ

ಅಂತರ ಜಿಲ್ಲೆ ಆರೋಗ್ಯ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಕರಾವಳಿ ಕರ್ನಾಟಕದ ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿ, ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ 78 ವರ್ಷದ ವೃದ್ಧರೊಬ್ಬರಿಗೆ ಮೊದಲ ಬಾರಿಗೆ ಮೋಟರೈಸ್ಡ್ ಟ್ರಾನ್ಸ್‌ಕ್ಯಾಥೆಟರ್ ಏಓರ್ಟಿಕ್ ವಾಲ್ವ್ ಅಳವಡಿಕೆ (ಟಿಎವಿಐ) ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಹೃದ್ರೋಗ ತಜ್ಞ ಡಾ. ಯೂಸುಫ್ ಕುಂಬ್ಳೆ ತಿಳಿಸಿದ್ದಾರೆ.

ಹೃದಯ ವೈಫಲ್ಯ ಮತ್ತು ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ವೇಳೆ ಹೃದಯದ ಮಹಾಪಧಮನಿಯ ಕವಾಟ ಸಂಪೂರ್ಣವಾಗಿ ಹಾನಿಗೊಳಗಾಗಿರುವುದು ಪತ್ತೆಯಾಗಿತ್ತು. 15 ವರ್ಷಗಳ ಹಿಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು, ವಯಸ್ಸಿನ ಕಾರಣದಿಂದ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಹೆಚ್ಚಿನ ಅಪಾಯ ಹೊಂದಿತ್ತು ಎಂದು ತಿಳಿಸಿದ್ದಾರೆ.

ಇಂತಹ ರೋಗಿಗಳಿಗೆ ಎದೆ ತೆರೆಯದೆ ಹೃದಯದ ಕವಾಟ ಬದಲಾಯಿಸುವ ಟಿಎವಿಐ ಚಿಕಿತ್ಸೆ ಪರಿಣಾಮಕಾರಿ ಆಯ್ಕೆಯಾಗಿದೆ. ಈ ಚಿಕಿತ್ಸೆಯಲ್ಲಿ ಕರಾವಳಿ ಕರ್ನಾಟಕದಲ್ಲೇ ಮೊದಲ ಬಾರಿಗೆ ವಿದ್ಯುನ್ಮಾನ ನಿಯಂತ್ರಿತ ಮೋಟರೈಸ್ಡ್ ಕವಾಟ ಅಳವಡಿಕೆ ತಂತ್ರಜ್ಞಾನ ಬಳಸಲಾಗಿದೆ. ಸಾಮಾನ್ಯ ವಿಧಾನದಲ್ಲಿ ಕವಾಟವನ್ನು ಕೈಯಾರೆ ಬಿಡುಗಡೆ ಮಾಡಲಾಗುತ್ತದೆ. ಆದರೆ ಹೊಸ ತಂತ್ರಜ್ಞಾನದಲ್ಲಿ ಕವಾಟವನ್ನು ಸರಿಯಾದ ಸ್ಥಾನದಲ್ಲಿ ಇರಿಸಿದ ಬಳಿಕ ಸ್ವಿಚ್ ಮೂಲಕ ಸ್ವಯಂಚಾಲಿತವಾಗಿ ಬಿಡುಗಡೆ ಮಾಡಬಹುದು. ಇದರಿಂದ ಕೈಯಾರೆ ನಿರ್ವಹಿಸುವ ಅಗತ್ಯ ಕಡಿಮೆಯಾಗುವುದರ ಜತೆಗೆ ಮಾನವ ದೋಷದ ಸಾಧ್ಯತೆಯೂ ತಗ್ಗುತ್ತದೆ ಎಂದರು.

ಇಂಡಿಯಾನಾ ಆಸ್ಪತ್ರೆಯು 2019ರಲ್ಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಟಿಎವಿಐ ಚಿಕಿತ್ಸೆಯನ್ನು ಪರಿಚಯಿಸಿತ್ತು. ಕಳೆದ ಏಳು ವರ್ಷಗಳಲ್ಲಿ ಶೂನ್ಯ ಪ್ರಕ್ರಿಯಾತ್ಮಕ ಮರಣ ಪ್ರಮಾಣದೊಂದಿಗೆ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

ವಯೋವೃದ್ಧರು ಹಾಗೂ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಅಪಾಯ ಹೊಂದಿರುವ ರೋಗಿಗಳಿಗೆ ಅತ್ಯಾಧುನಿಕ ಕ್ಯಾಥೆಟರ್ ಆಧಾರಿತ ಚಿಕಿತ್ಸೆಗಳು ಹೊಸ ಭರವಸೆ ನೀಡುತ್ತಿವೆ. ಕರಾವಳಿ ಕರ್ನಾಟಕ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಅತ್ಯಾಧುನಿಕ ಹೃದಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದು ಆಸ್ಪತ್ರೆಯ ಉದ್ದೇಶವಾಗಿದೆ ಎಂದು ಡಾ. ಯೂಸುಫ್ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *