ಮಂಗಳೂರು: ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮಾವಳಿಗಳು ಮತ್ತು ಅನುಮೋದನಾ ಪ್ರಕ್ರಿಯೆಯಲ್ಲಿನ ವಿಳಂಬದಿಂದ ಮಂಗಳೂರಿನಲ್ಲಿ ಮನೆ ನಿರ್ಮಿಸಲು ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ರೂಪಿಸಿರುವ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ಹಾಗೂ ಹೊಸ ವಲಯ ಕಟ್ಟಡ ನಿಯಮಾವಳಿಗಳನ್ನು ಮರುಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಕಟ್ಟಡ ಪರವಾನಗಿ ಪಡೆವ ಆನ್ಲೈನ್ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದ ಅನುಮೋದನೆ ವಿಳಂಬವಾಗುತ್ತಿದೆ. ಸಣ್ಣ ಮನೆ ನಿರ್ಮಾಣಕ್ಕೂ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ದೊಡ್ಡ ಕಟ್ಟಡಗಳಿಗೆ ಆಫ್ಲೈನ್ ಮೂಲಕ ತ್ವರಿತ ಅನುಮತಿ ನೀಡುತ್ತಿರುವುದು ತಾರತಮ್ಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಹೊಸ ವಲಯ ನಿಯಮದ ಟೆಲಿಸ್ಕೋಪಿಕ್ ಸೆಟ್ಬ್ಯಾಕ್ ವ್ಯವಸ್ಥೆಯಡಿ ಏಳು ಅಂತಸ್ತಿನ ಕಟ್ಟಡಕ್ಕೆ ಒಂದು ಮೀಟರ್ ಹಾಗೂ ಎರಡು ಅಂತಸ್ತಿನ ಮನೆಗೆ 1.5 ಮೀಟರ್ ಅಂತರ ನಿಗದಿಪಡಿಸಿರುವುದು ಸಮಂಜಸವಲ್ಲ. ಇದು ಅಗ್ನಿಶಾಮಕ ವಾಹನಗಳ ಸಂಚಾರ ಸೇರಿದಂತೆ ಸಾರ್ವಜನಿಕ ಸುರಕ್ಷತೆಗೆ ತೊಂದರೆಯಾಗಬಹುದು. ಆದ್ದರಿಂದ ಈ ನಿಯಮವನ್ನು ರದ್ದುಗೊಳಿಸಬೇಕು ಎಂದು ತಿಳಿಸಿದರು.
ಹಿಂದೆ 6 ಮತ್ತು 7.5 ಮೀಟರ್ ರಸ್ತೆಗಳಿಗೆ ಜಾಗ ಬಿಟ್ಟುಕೊಟ್ಟವರಿಗೆ ನೀಡಲಾಗುತ್ತಿದ್ದ ಟಿಡಿಆರ್ ಹಾಗೂ ಪ್ರೀಮಿಯಂ ಎಫ್ಎಆರ್ ಸೌಲಭ್ಯಗಳನ್ನು ಮರುಸ್ಥಾಪಿಸಬೇಕು. ಹೋಟೆಲ್, ವಸತಿಗೃಹ ಮತ್ತು ಶಾಲೆಗಳ ನಿರ್ಮಾಣಕ್ಕೆ 12 ಮೀಟರ್ ರಸ್ತೆ ಕಡ್ಡಾಯಗೊಳಿಸಿರುವ ನಿಯಮ ಮಂಗಳೂರಿನ ಭೌಗೋಳಿಕ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ. ಇದರಿಂದ ಧಾರ್ಮಿಕ ಕೇಂದ್ರಗಳು ಮತ್ತು ಶಾಲೆಗಳ ಅಭಿವೃದ್ಧಿಗೂ ಅಡ್ಡಿಯಾಗಲಿದೆ ಎಂದು ತಿಳಿಸಿದರು.
ಲೇಔಟ್ ಅನುಮೋದನೆಗೆ ವಿವಿಧ ಇಲಾಖೆಗಳ ನಿರಾಕ್ಷೇಪಣಾ ಪತ್ರ ಪಡೆಯಲು ಎರಡು-ಮೂರು ವರ್ಷಗಳವರೆಗೆ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಯನ್ನು ಮುಡಾ ಮೂಲಕವೇ ಸರಳಗೊಳಿಸಬೇಕು. ಮಂಗಳಾ ಕಾರ್ನಿಷ್ ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿ ಯೋಜನೆಯಲ್ಲಿನ ರಸ್ತೆ ಜೋಡಣೆ ಮತ್ತು ಅಗಲೀಕರಣದ ಪ್ರಸ್ತಾವನೆಗಳಿಂದ ಜನವಸತಿ ಪ್ರದೇಶಗಳ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಯೋಜನೆಗಳಲ್ಲಿನ ಬದಲಾವಣೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
20 ವರ್ಷಗಳಿಂದ ಸಮಗ್ರ ಅಭಿವೃದ್ಧಿ ಯೋಜನೆಯ ಪರಿಷ್ಕರಣೆ ನಡೆದಿಲ್ಲ. ನಗರಾಭಿವೃದ್ಧಿಯ ಹೆಸರಿನಲ್ಲಿ ಜನರ ಮನೆ ನಿರ್ಮಾಣದ ಹಕ್ಕು, ಸುರಕ್ಷತೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗಬಾರದು. ಈ ನಿಟ್ಟಿನಲ್ಲಿ ಹೊಸ ವಲಯ ನಿಯಮಾವಳಿಗಳನ್ನು ಮರುಪರಿಶೀಲಿಸಿ ನ್ಯಾಯಯುತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಎಂಜಿನಿಯರ್ ಸಂಘದ ಅಧ್ಯಕ್ಷ ಎಂಜಿನಿಯರ್ ಐ. ಯೋಗೀಶ್ ಪೈ ಇದ್ದರು.



