ಮಣಿಪಾಲ ಆರೋಗ್ಯ ಕಾರ್ಡ್ ಲಾಭ ವಿಫುಲ, ನೋಂದಣಿಗೆ ಅಗಸ್ಟ್ 31 ಕೊನೆ ದಿನ: ಡಾ. ದಿಲೀಪ್ ನಾಯಕ್

ಆರೋಗ್ಯ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಕೈಗೆಟುಕುವ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಪಡೆಯಲು ನೆರವಾಗುವ ಮಣಿಪಾಲ ಆರೋಗ್ಯ ಕಾರ್ಡ್ 2026ರ ನೋಂದಣಿಗೆ ಆ.31 ಕೊನೆಯ ದಿನವಾಗಿದೆ. ಕರ್ನಾಟಕ ಹಾಗೂ ಕೇರಳದ ಸುಮಾರು 6.5 ಲಕ್ಷ ಮಂದಿ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದು, ಸಾರ್ವಜನಿಕರು ನಿಗದಿತ ಅವಧಿಯೊಳಗೆ ಸದಸ್ಯತ್ವ ಪಡೆದುಕೊಳ್ಳುವಂತೆ ಮಾಹೆ ಮಂಗಳೂರು ಕ್ಯಾಂಪಸ್‌ನ ಸಹ-ಕುಲಾಧಿಪತಿ ಡಾ. ದಿಲೀಪ್ ಜಿ. ನಾಯಕ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾಜದ ಎಲ್ಲ ವರ್ಗಗಳಿಗೂ, ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ರೂಪಿಸಲಾಗಿದೆ. 2000ರಲ್ಲಿ ಆರಂಭಗೊಂಡ ಯೋಜನೆ ಕಳೆದ 26 ವರ್ಷಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿದೆ. ಆರಂಭದಲ್ಲಿ 3,200 ಕುಟುಂಬಗಳಿಂದ ಆರಂಭವಾದ ಯೋಜನೆಯಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಸುಮಾರು 2 ಲಕ್ಷ ಕುಟುಂಬಗಳು ನೋಂದಾಯಿಸಿಕೊಂಡಿವೆ ಎಂದರು.

ಕಾರ್ಡ್ ಸದಸ್ಯರು ಕೆಎಂಸಿ ಆಸ್ಪತ್ರೆ ಅತ್ತಾವರ, ಎಂಸಿ ಆಸ್ಪತ್ರೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಕಟೀಲು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ, ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಸೇರಿದಂತೆ ಮಣಿಪಾಲ ಮತ್ತು ಮಂಗಳೂರಿನ ಎರಡು ದಂತ ಮಹಾವಿದ್ಯಾಲಯಗಳಲ್ಲಿ ವಿವಿಧ ವೈದ್ಯಕೀಯ ಸೇವೆಗಳ ಮೇಲೆ ರಿಯಾಯಿತಿ ಪಡೆಯಬಹುದು. ನೋಂದಣಿ ಬಳಿಕ ಕಾರ್ಡ್ 2027ರ ಆಗಸ್ಟ್ 15 ರವರೆಗೆ ಮಾನ್ಯವಾಗಿರುತ್ತದೆ. ಆಸ್ಪತ್ರೆಯ ಬಿಲ್‌ಗಳಲ್ಲಿ ಗರಿಷ್ಠ ಶೇ.25ರವರೆಗೆ ರಿಯಾಯಿತಿ ಲಭ್ಯವಿದೆ ಎಂದು ತಿಳಿಸಿದರು.

ಕೆಎಂಸಿ ಆಸ್ಪತ್ರೆ ಅತ್ತಾವರದ ವೈದ್ಯಕೀಯ ಅಧೀಕ್ಷಕ ಡಾ. ಚಕ್ರಪಾಣಿ ಎಂ.ಅವರು ಮಾತನಾಡಿ, ವೈಯಕ್ತಿಕ ಸದಸ್ಯತ್ವಕ್ಕೆ ರೂ.350, ಸಂಗಾತಿ ಹಾಗೂ 25 ವರ್ಷದೊಳಗಿನ ಅವಿವಾಹಿತ ಮಕ್ಕಳನ್ನು ಒಳಗೊಂಡ ಕೌಟುಂಬಿಕ ಸದಸ್ಯತ್ವಕ್ಕೆ ರೂ.700 ಶುಲ್ಕವಿದೆ. 25 ವರ್ಷದೊಳಗಿನ ಯಾವುದೇ ಸಂಖ್ಯೆಯ ಅವಿವಾಹಿತ ಮಕ್ಕಳು ಹಾಗೂ ಅತ್ತೆ-ಮಾವ ಸೇರಿದಂತೆ ನಾಲ್ವರು ಪೋಷಕರನ್ನು ಒಳಗೊಂಡ ಕೌಟುಂಬಿಕ ಪ್ಲಸ್ ಸದಸ್ಯತ್ವಕ್ಕೆ ರೂ.900 ಶುಲ್ಕ ನಿಗದಿಪಡಿಸಲಾಗಿದೆ ಎಂದರು.

ಕೆಎಂಸಿ ಆಸ್ಪತ್ರೆ ಅತ್ತಾವರದ ಉಪ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಮಡಿ ಮಾತನಾಡಿ, ಕಾರ್ಡ್‌ದಾರರಿಗೆ ಸಮಾಲೋಚನಾ ಶುಲ್ಕದಲ್ಲಿ ಶೇ.50, ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ.20, ಸಿಟಿ, ಎಂಆರ್‌ಐ, ಅಲ್ಟ್ರಾಸೌಂಡ್, ಎಕ್ಸ್‌ರೇ ಮತ್ತು ವಿಕಿರಣಶಾಸ್ತ್ರ ಪರೀಕ್ಷೆಗಳಲ್ಲಿ ಶೇ.20, ಹೊರರೋಗಿಗಳ ಔಷಧಿಗಳಲ್ಲಿ ಶೇ.10 ಹಾಗೂ ಒಳರೋಗಿ ಬಿಲ್‌ಗಳಲ್ಲಿ ಶೇ.25 ರಿಯಾಯಿತಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಅಪರೇಷನ್ಸ್ ವಿಭಾಗದ ಸಮೂಹ ವ್ಯವಸ್ಥಾಪಕ ರವಿರಾಜ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉತ್ತರ ಕೇರಳದಾದ್ಯಂತ ಅಧಿಕೃತ ಏಜೆಂಟ್‌ಗಳ ಮೂಲಕ ಸದಸ್ಯತ್ವ ಪಡೆಯಬಹುದು. ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಕಟೀಲುಗಳಲ್ಲಿಯೂ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 7022078002 ಅಥವಾ 0824-2285214 ಸಂಖ್ಯೆಗೆ ಸಂಪರ್ಕಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಗಣೇಶ್ ಹೆಗ್ಡೆ ಇದ್ದರು.

Leave a Reply

Your email address will not be published. Required fields are marked *