ನೇಪಾಳ-ಟಿಬೆಟ್ ಗಡಿಭಾಗದಲ್ಲಿ ದಿಢೀರ್ ಪ್ರವಾಹ, ಉ. ಕ ಜಿಲ್ಲೆಯವರ ಮಾಹಿತಿ ನೀಡಿ: ಲಕ್ಷ್ಮೀಪ್ರಿಯಾ ಜಿಲ್ಲಾಧಿಕಾರಿ

ಜಿಲ್ಲಾ ಸುದ್ದಿ ಕಾರವಾರ ರಾಜ್ಯ ಶಿರಸಿ

Spread the love

ಕಾರವಾರ: ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಆ.26 ರಂದು ದಿಢೀರ್ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಿಂದ ನೇಪಾಳಕ್ಕೆ ಪ್ರವಾಸ ಅಥವಾ ಇತರ ಕಾರಣಗಳಿಗಾಗಿ ತೆರಳಿರುವವರ ಕುರಿತು ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸುತ್ತಿದೆ. ಜಿಲ್ಲೆಯ ಯಾರಾದರೂ ನಾಪತ್ತೆಯಾಗಿದ್ದರೆ, ಪ್ರವಾಹ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ ಅಥವಾ ಪ್ರಸ್ತುತ ಸಂಪರ್ಕಕ್ಕೆ ಸಿಗದಿದ್ದರೆ ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮನವಿ ಮಾಡಿದ್ದಾರೆ.

ಕುಟುಂಬಸ್ಥರು, ಸ್ನೇಹಿತರು ಅಥವಾ ಪರಿಚಯಸ್ಥರು ಸಂಬಂಧಪಟ್ಟ ವ್ಯಕ್ತಿಯ ಹೆಸರು, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ, ಪ್ರಯಾಣದ ವಿವರಗಳು ಹಾಗೂ ಕೊನೆಯದಾಗಿ ಸಂಪರ್ಕವಾದ ದಿನಾಂಕ ಮತ್ತು ಸ್ಥಳ ಸೇರಿದಂತೆ ಲಭ್ಯವಿರುವ ಮಾಹಿತಿಯನ್ನು ಯಾವುದೇ ವಿಳಂಬವಿಲ್ಲದೆ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುರ್ತು ಸಂಪರ್ಕಕ್ಕೆ ಸಹಾಯವಾಣಿ

ಮಾಹಿತಿಯನ್ನು ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಕಾರ್ಯಾಚರಣೆ ಕೇಂದ್ರದ 08382-229857, ಉಚಿತ ಸಹಾಯವಾಣಿ 1077, ಮೊಬೈಲ್ 9483511015 ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ 080-22253707 ಸಂಖ್ಯೆಗೆ ನೀಡಬಹುದು ಎಂದು ತಿಳಿಸಿದ್ದಾರೆ.

ಇ-ಮೇಲ್ ಮೂಲಕ seockarnataka@gmail.com ವಿಳಾಸಕ್ಕೂ ಮಾಹಿತಿ ಕಳುಹಿಸಬಹುದು. ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಹಾಯವಾಣಿ 977-9851316807, 977-9709107500 ಹಾಗೂ 977-9810326117 ಸಂಖ್ಯೆಗಳಿಗೂ ಸಂಪರ್ಕಿಸಬಹುದಾಗಿದೆ ಎಂದರು.

ನಾಪತ್ತೆ ಆಗಿರುವವರ ಪತ್ತೆ, ಸುರಕ್ಷತೆ ಹಾಗೂ ಅಗತ್ಯ ನೆರವು ಒದಗಿಸುವುದರ ಜತೆಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ತ್ವರಿತ ಸಮನ್ವಯ ಸಾಧಿಸಲು ಅನುಕೂಲವಾಗುವಂತೆ ಸಾರ್ವಜನಿಕರು ಲಭ್ಯವಿರುವ ಮಾಹಿತಿಯನ್ನು ತಕ್ಷಣ ಜಿಲ್ಲಾಡಳಿತಕ್ಕೆ ಒದಗಿಸುವಂತೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *