ಮಂಗಳೂರು: ಸುಮಾರು ಒಂದೂವರೆ ವರ್ಷದ ಬಳಿಕ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆ ಜಿಲ್ಲಾಧಿಕಾರಿ ಗೈರುಹಾಜರಾಗಿದ್ದನ್ನು ವಿರೋಧಿಸಿ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗುರುವಾರ ಸಭೆ ಮುಂದೂಡಲಾಯಿತು. ಪಡೀಲ್‌ನ ಪ್ರಜಾಸೌಧದಲ್ಲಿ ನಡೆದ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣ ಆಗಿದ್ದು, ಕೊನೆಗೆ ಜಿಲ್ಲಾಧಿಕಾರಿ ಸೂಚನೆಯಂತೆ ಸಭೆಯನ್ನು ಅಗಸ್ಟ್ 20 ಕ್ಕೆ ಮರು ನಿಗದಿಪಡಿಸಿದ ಘಟನೆ ನಡೆದಿದೆ.
ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಹಾನಿ ಹಾಗೂ ವಿಪತ್ತು ಪರಿಹಾರ ಕಾಮಗಾರಿಗಳ ಪರಿಶೀಲನೆಗೆ ತೆರಳಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಅವರೂ ಅವರೊಂದಿಗೆ ತೆರಳಿದ್ದರು. ಆದರೆ ಪೂರ್ವನಿಯೋಜಿತವಾಗಿದ್ದ ಕುಂದು ಕೊರತೆ ಸಭೆಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ನೂರಾರು ದಲಿತ ಮುಖಂಡರು ಹಾಗೂ ಸಾರ್ವಜನಿಕರು ಆಗಮಿಸಿದ್ದರು.
ಜಿಲ್ಲಾಧಿಕಾರಿ ಬದಲಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆ ಆರಂಭಿಸಲು ಮುಂದಾದಾಗ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು. ಒಂಭತ್ತು ದಿನಗಳ ಹಿಂದೆಯೇ ಸಭೆಯ ನೋಟಿಸ್ ನೀಡಲಾಗಿದ್ದರೂ ಜಿಲ್ಲಾಧಿಕಾರಿ ಗೈರು ಹಾಜರಾಗಿರುವುದು ಸಮುದಾಯದ ಬಗ್ಗೆ ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಸಂಘಟನಾ ಸಂಚಾಲಕ ರಘು ಎಕ್ಕಾರು ಮಾತನಾಡಿ, “ಸುಮಾರು ಒಂದೂವರೆ ವರ್ಷದ ಬಳಿಕ ಸಭೆ ಕರೆಯಲಾಗಿದೆ. ಜಿಲ್ಲಾಧಿಕಾರಿಗೆ ಸಭೆಗೆ ಬರಲು ಸಾಧ್ಯವಾಗದಿದ್ದರೆ ಮುಂಚಿತವಾಗಿಯೇ ಮಾಹಿತಿ ನೀಡಬೇಕಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಜನರು ತಮ್ಮ ಸ್ವಂತ ಖರ್ಚಿನಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಿದ್ದಾರೆ. ಜಿಲ್ಲಾಧಿಕಾರಿಯೇ ಇಲ್ಲದ ಸಭೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷ್ಣಾನಂದ ಮಾತನಾಡಿ, ಮೀಸಲಾತಿ ಸೇರಿದಂತೆ ಸಮುದಾಯದ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ಚರ್ಚೆಯಾಗಬೇಕು. ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸುವುದು ಕೇವಲ ಔಪಚಾರಿಕ ಆಗುತ್ತದೆ ಎಂದರು.
ಸುಪ್ರೀತಾ ಕೃಷ್ಣಾಪುರ ಮಾತನಾಡಿ, ಕೆಲಸಕ್ಕೆ ರಜೆ ಪಡೆದು ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿರುವ ಜನರಿಗೆ ಜಿಲ್ಲಾಧಿಕಾರಿ ಇಲ್ಲದ ಸಭೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಸಭೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.
ಶೇಖರ ಲಾಯಿಲ ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿ ಬೆಳ್ತಂಗಡಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದರೂ ಮನೆಗಳಿಗೆ ಭೇಟಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹೇಮಲತಾ ಅವರು ದಲಿತ ಮುಖಂಡರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಜಿಲ್ಲಾಧಿಕಾರಿ ಇಲ್ಲದೆ ಸಮಸ್ಯೆಗಳ ಕುರಿತು ನಿರ್ಧಾರವಾಗುವುದಿಲ್ಲ ಎಂದು ಮುಖಂಡರು ತಮ್ಮ ನಿಲುವನ್ನು ಪುನರುಚ್ಚರಿಸಿ ಸಭೆಯನ್ನು ಮುಂದೂಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಅವರು ಜಿಲ್ಲಾಧಿಕಾರಿ ಜತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಮುಖಂಡರನ್ನು ಉದ್ದೇಶಿಸಿ, “ನಿಮ್ಮ ಕೋರಿಕೆಯಂತೆ ಜಿಲ್ಲಾಧಿಕಾರಿ ಅವರು ಅಗಸ್ಟ್ 20 ರಂದು ಕುಂದುಕೊರತೆ ಸಭೆಯನ್ನು ಮರುನಿಗದಿಪಡಿಸಿದ್ದಾರೆ” ಎಂದರು.
ಹಿರಿಯ ಅಧಿಕಾರಿಗಳಾದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ್, ಸಂತೋಷ ಸೇರಿದಂತೆ ಹಲವರು ಇದ್ದರು.
What do you feel about this post?
Like
Love
Happy
Haha
Sad





