ಮಂಗಳೂರು: ಉದ್ಯೋಗ, ಕುಟುಂಬ ಅಥವಾ ಇತರ ಕಾರಣಗಳಿಂದ ನಿಯಮಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) 2026–27ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ವಿವಿಧ ಪದವಿ, ಸ್ನಾತಕೋತ್ತರ, ಡಿಪ್ಲೊಮ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕೆಎಸ್‌ಒಯು ಕುಲಪತಿ ಎ.ಪಿ. ಜ್ಞಾನಪ್ರಕಾಶ್ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕರ್ನಾಟಕದಲ್ಲಿ ದೂರಶಿಕ್ಷಣ ನೀಡಲು ಮಾನ್ಯತೆ ಪಡೆದ ಏಕೈಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವಾಗಿ ಕೆಎಸ್‌ಒಯು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಾದ್ಯಂತ 38 ಪ್ರಾದೇಶಿಕ ಕೇಂದ್ರಗಳು ಹಾಗೂ 118 ಕಲಿಕಾರ್ಥಿ ಸಹಾಯ ಕೇಂದ್ರಗಳ ಮೂಲಕ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. 31 ವರ್ಷಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಕೆಎಸ್‌ಒಯುನಿಂದ ಪದವಿ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವಿಗಳನ್ನು ಪಡೆದಿದ್ದಾರೆ. ವಿವಿಗಳ ಪದವಿಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮಾನ್ಯತೆ ಇದ್ದು, ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪದವಿಗಳಿಗೆ ಸಮಾನ ಮಾನ್ಯತೆ ಇದೆ ಎಂದು ತಿಳಿಸಿದರು.
ಜೂನ್ 22 ರಿಂದ ಪ್ರವೇಶಾತಿ ಆರಂಭವಾಗಿದ್ದು, ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್‌ಡಬ್ಲ್ಯು., ಬಿ.ಎಸ್‌ಸಿ., ಎಂ.ಎ., ಎಂ.ಕಾಂ., ಎಂ.ಸಿ.ಎ., ಎಂ.ಬಿ.ಎ., ಎಂ.ಎಸ್‌ಸಿ., ಎಂ.ಎಸ್‌ಡಬ್ಲ್ಯು. ಸೇರಿದಂತೆ ವಿವಿಧ ಯುಜಿಸಿ ಅನುಮೋದಿತ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಕೆಎಸ್‌ಒಯುಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ ‘ಎ ಪ್ಲಸ್’ ಶ್ರೇಣಿ ಲಭಿಸಿದ್ದು, ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ ದೇಶದ ಮುಕ್ತ ವಿಶ್ವವಿದ್ಯಾಲಯಗಳ ಪೈಕಿ ಎರಡನೇ ಸ್ಥಾನ ಪಡೆದಿದೆ. ಉದ್ಯೋಗ ನಿರ್ವಹಿಸುತ್ತಲೇ ಉನ್ನತ ಶಿಕ್ಷಣ ಪಡೆಯಲು ಹಾಗೂ ಒಂದೇ ವೇಳೆ ಎರಡು ಪದವಿಗಳನ್ನು ಅಭ್ಯಾಸ ಮಾಡಲು ವಿಶ್ವವಿದ್ಯಾಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಡೀನ್ ಆನಂದ ಗೌಡ, ಪ್ರಾದೇಶಿಕ ನಿರ್ದೇಶಕರಾದ ಸ್ಮಿತಾ, ಮಂಜುನಾಥ್ ಇದ್ದರು.
What do you feel about this post?
Like
Love
Happy
Haha
Sad





