ಮಂಗಳೂರು: ಎರಡು ತಿಂಗಳ ಕಾಲ ಕರಾವಳಿಯ ಮೀನುಗಾರಿಕಾ ದಕ್ಕೆಗಳಲ್ಲಿ ನಿಶ್ಚಲವಾಗಿ ನಿಂತಿದ್ದ ಯಾಂತ್ರೀಕೃತ ಬೋಟ್‌ಗಳು ಮತ್ತೆ ಸಮುದ್ರದತ್ತ ಮುಖ ಮಾಡುವ ಕ್ಷಣ ಬಂದಿದ್ದರೂ, ಹವಾಮಾನ ಇಲಾಖೆಯ ಎಚ್ಚರಿಕೆ ಮೀನುಗಾರರ ಉತ್ಸಾಹಕ್ಕೆ ತಣ್ಣೀರೆರಚಿದೆ. 61 ದಿನಗಳ ಟ್ರಾಲಿಂಗ್ ನಿಷೇಧ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಆಗಸ್ಟ್ ನಿಂದ ಆಳ ಸಮುದ್ರ ಮೀನುಗಾರಿಕೆ ಪುನರಾರಂಭಗೊಳ್ಳಬೇಕಿದ್ದರೂ, ಪ್ರತಿಕೂಲ ಹವಾಮಾನದಿಂದಾಗಿ ಬೋಟ್‌ಗಳು ಸಮುದ್ರಕ್ಕಿಳಿಯದ ಸಾಧ್ಯತೆ ಎದುರಾಗಿದೆ.
ಮಂಗಳೂರು ಬಂದರಿನಲ್ಲಿ ಕಳೆದ ನಾಲ್ಕು ದಿನಗಳಿಂದಲೇ ಬಿರುಸಿನ ಸಿದ್ಧತೆಗಳು ನಡೆದಿವೆ. ಎರಡು ತಿಂಗಳ ವಿರಾಮದ ಬಳಿಕ ಮೀನುಗಾರರು, ಕಾರ್ಮಿಕರು ಹಾಗೂ ಬೋಟ್ ಮಾಲೀಕರು ಹೊಸ ಋತುವಿನ ಮೀನುಗಾರಿಕೆಗೆ ಸಜ್ಜಾಗಿದ್ದಾರೆ. ಆದರೆ ಸಮುದ್ರದಲ್ಲಿ ಗಾಳಿ ಹಾಗೂ ಮಳೆಯ ತೀವ್ರತೆ ಹೆಚ್ಚುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವುದರಿಂದ ಆರಂಭಿಕ ಮೀನುಗಾರಿಕೆ ಅನಿಶ್ಚಿತತೆಯಲ್ಲಿ ಸಿಲುಕಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಂದಾಯಿತ 1,655 ಯಾಂತ್ರೀಕೃತ ಬೋಟ್‌ಗಳು ಮೀನುಗಾರಿಕೆಗೆ ಸಜ್ಜಾಗಿವೆ. ಬಲೆ ದುರಸ್ತಿ, ಎಂಜಿನ್ ನಿರ್ವಹಣೆ, ಐಸ್ ಹಾಗೂ ಕುಡಿಯುವ ನೀರಿನ ಸಂಗ್ರಹ, ಬಂದರು ಸ್ವಚ್ಛತೆ ಸೇರಿದಂತೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದರೂ, ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕವೇ ಹೆಚ್ಚಿನ ಬೋಟ್‌ಗಳು ಸಮುದ್ರಕ್ಕಿಳಿಯುವ ಸಾಧ್ಯತೆ ಇದೆ.
ಹವಾಮಾನ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ಮೀನುಗಾರರು ಎಚ್ಚರಿಕೆಯಿಂದ ವರ್ತಿಸುವಂತೆ ಸೂಚಿಸಲಾಗಿದೆ. ಅಗತ್ಯ ಪರವಾನಗಿ, ದಾಖಲೆಗಳ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಪ್ರತಿಕೂಲ ಹವಾಮಾನ ಮುಂದುವರಿದರೆ ಬೋಟ್‌ಗಳ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಅಂತಿಮ ನಿರ್ಧಾರ ಪರಿಸ್ಥಿತಿಯನ್ನು ಅವಲಂಬಿಸಿರಲಿದೆ ಎಂದು ಮಂಗಳೂರು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ದರ್ಶನ್ ಕೆ.ಟಿ. ಅವರ ತಿಳಿಸಿದ್ದಾರೆ.
ಸಹಾಯಧನದ ಡೀಸೆಲ್ ವಿತರಣೆಗೆ ಸಿದ್ಧತೆ
ಮೀನುಗಾರಿಕಾ ಋತು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಲಾಖೆಯು ಸಹಾಯಧನದ ಡೀಸೆಲ್ ವಿತರಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಮೀನುಗಾರರಿಗೆ ಪಾಸ್‌ಬುಕ್ ವಿತರಣೆ ಪ್ರಕ್ರಿಯೆಯೂ ನಡೆಯುತ್ತಿದೆ. ಸಮುದ್ರ ಪೂಜೆಯ ಬಳಿಕ ಮೀನುಗಾರಿಕೆ ಆರಂಭಿಸುವ ಸಂಪ್ರದಾಯವನ್ನು ಈ ಬಾರಿಯೂ ಮುಂದುವರಿಸಲಾಗುತ್ತದೆ ಎಂದು ತಿಳಿಸಿದರು.
ಮೊದಲ ಮೀನುಗಾರಿಕೆಯೇ ವರ್ಷದ ದಿಕ್ಕು ನಿರ್ಧರಿಸುತ್ತದೆ
ಮೀನುಗಾರಿಕಾ ಬೋಟ್ ಮಾಲೀಕ ರಾಜರತ್ನ ಸನಿಲ್ ಮಾತನಾಡಿ, ಉತ್ತಮ ಮಳೆಯ ನಂತರ ಮೀನುಗಳ ಲಭ್ಯತೆ ಹೆಚ್ಚುವ ನಿರೀಕ್ಷೆ ಇದೆ. ಆದರೆ ಆರಂಭದಲ್ಲೇ ಹವಾಮಾನ ವೈಪರೀತ್ಯ ಎದುರಾದರೆ ಉದ್ಯಮಕ್ಕೆ ಹೊಡೆತ ಬೀಳಬಹುದು. ಸದ್ಯ ಸುಮಾರು ಶೇ.25ರಷ್ಟು ಬೋಟ್‌ಗಳು ಮಾತ್ರ ತಕ್ಷಣ ಸಮುದ್ರಕ್ಕಿಳಿಯುವ ಸ್ಥಿತಿಯಲ್ಲಿವೆ. ಇಲಾಖೆಯ ಹಸಿರು ನಿಶಾನೆ ದೊರೆತ ಕೂಡಲೇ ಮೀನುಗಾರಿಕೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad





