ಮಂಗಳೂರು: ಸದಾ ಒಂದಿಲ್ಲ ಒಂದು ಸುದ್ದಿಯಲ್ಲಿ ಇರುವ ಮಂಗಳೂರು ವಿವಿ ಈಗ ಮತ್ತೆ ಹೊಸ ದಾಖಲೆ ಮಾಡುವ ಮೂಲಕ ಸುದ್ದಿಯಲ್ಲಿದೆ. ವಿಶ್ವವಿದ್ಯಾಲಯ ವಿವಿಧ ಪದವಿ ಕೋರ್ಸ್‌ಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಮೌಲ್ಯಮಾಪನ ಆಗಿ ಎರಡು ದಿನಗಳಲ್ಲೇ ಪ್ರಕಟಿಸುವ ಮೂಲಕ ಹೊಸ ದಾಖಲೆಗೆ ಸೇರ್ಪಡೆ ಆಗಿದೆ.
ಜೂನ್- ಜುಲೈನಲ್ಲಿ ನಡೆದ ವಿವಿಧ ಪದವಿ ಕೋರ್ಸ್‌ಗಳ 6 ನೇ ಸೆಮಿಸ್ಟರ್ ಹಾಗೂ ಬಿ.ಎಚ್.ಎಂ. 8 ನೇ ಸೆಮಿಸ್ಟರ್ ಪರೀಕ್ಷೆಗಳ ಮೌಲ್ಯಮಾಪನ ಜುಲೈ 18 ರಂದು ಪೂರ್ಣಗೊಂಡಿರುವ ಬೆನ್ನಲ್ಲೆ ಜುಲೈ 20 ರಂದು ಫಲಿತಾಂಶ ಪ್ರಕಟಿಸುವ ಮೂಲಕ ರಾಜ್ಯದಲ್ಲಿ ಗಮನ ಸೆಳೆದಿದೆ.
17,347 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮೊದಲ ಹಂತದಲ್ಲಿ ಮೌಲ್ಯಮಾಪನ ಪೂರ್ಣಗೊಂಡ 13,286 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಟಿಸಲಾಗಿದೆ. ಬಿ.ಎಸ್ಸಿ, ಬಿ.ಕಾಂ, ಬಿ.ಸಿ.ಎ, ಬಿ.ಎಸ್.ಡಬ್ಲ್ಯೂ., ಬಿ.ವಿ.ಎ. ಸೇರಿದಂತೆ ಹಲವು ಪದವಿ ಕೋರ್ಸ್‌ಗಳ 6 ನೇ ಸೆಮಿಸ್ಟರ್ ಹಾಗೂ ಬಿ.ಎಚ್.ಎಂ. 8 ನೇ ಸೆಮಿಸ್ಟರ್ ಫಲಿತಾಂಶಗಳು ಪ್ರಕಟಗೊಂಡಿವೆ.
ಬಿ.ಎ., ಬಿ.ಬಿ.ಎ. ಸೇರಿದಂತೆ ಇತರೆ ಕೋರ್ಸ್‌ಗಳ 2 ನೇ, 4 ನೇ ಹಾಗೂ 6ನೇ ಸೆಮಿಸ್ಟರ್ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶವನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ. ಈ ಬಾರಿ ಮೌಲ್ಯಮಾಪನ ಕೇಂದ್ರಗಳಲ್ಲಿಯೇ ಪ್ರಾಧ್ಯಾಪಕರು ಅಂಕಗಳನ್ನು ನೇರವಾಗಿ ಗಣಕೀಕೃತ ವ್ಯವಸ್ಥೆಯಲ್ಲಿ ದಾಖಲಿಸಿದ್ದರಿಂದ ಫಲಿತಾಂಶವನ್ನು ಅತ್ಯಂತ ವೇಗವಾಗಿ ಸಿದ್ಧಪಡಿಸಲು ಸಾಧ್ಯವಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್ . ಧರ್ಮ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯು ‘ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಪೋರ್ಟಲ್‌ನಲ್ಲಿ ತಮ್ಮ ವೈಯಕ್ತಿಕ ಪ್ರವೇಶ ವಿವರಗಳನ್ನು ಬಳಸಿ ಫಲಿತಾಂಶ ವೀಕ್ಷಣೆ ಮಾಡಬಹುದು. ಫಲಿತಾಂಶದಿಂದ ಅತೃಪ್ತರಾಗಿರುವ ವಿದ್ಯಾರ್ಥಿಗಳಿಗೆ ಶೀಘ್ರವೇ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
What do you feel about this post?
Like
Love
Happy
Haha
Sad





