ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಪಕ್ಷದ ಐವರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಚುನಾವಣಾ ಫಲಿತಾಂಶವು ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಅಸಮಾಧಾನಕ್ಕೆ ಕಾರಣ ಆಗಿದೆ.
ಚುನಾವಣೆಯಲ್ಲಿ ಮೈತ್ರಿ ಪಕ್ಷದ ಕೆಲವು ಶಾಸಕರು ಅಡ್ಡಮತದಾನ ಮಾಡಿರುವುದು ಫಲಿತಾಂಶದ ಮೇಲೆ ಮಹತ್ವದ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಬಿಜೆಪಿ 3 ರಿಂದ 4 ಮಂದಿ ಹಾಗೂ ಜೆಡಿಎಸ್ 6 ರಿಂದ 7 ಮಂದಿ ಶಾಸಕರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯ ಆಗಿದ್ದು, ಇದರಿಂದ ಮೈತ್ರಿ ನಾಯಕರಿಗೆ ಭಾರೀ ಮುಖಭಂಗ ಆಗಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ 135, ಬಿಜೆಪಿಗೆ 62 ಹಾಗೂ ಜೆಡಿಎಸ್‌ಗೆ 18 ಶಾಸಕರ ಬಲವಿತ್ತು. ಈ ಪೈಕಿ ಬಿಜೆಪಿ ಅಭ್ಯರ್ಥಿಗಳಾದ ರಘು ಕೌಟಿಲ್ಯ 29 ಮತ ಪಡೆದು ಗೆಲುವು ಸಾಧಿಸಿದರೆ, ಲಿಂಗರಾಜ ಪಾಟೀಲ್ ಪ್ರಯಾಸದ ಜಯ ದಾಖಲಿಸಿದ್ದಾರೆ. ಗೆಲುವಿಗೆ ಅಗತ್ಯ ಇದ್ದ 28 ಮತಗಳ ಪೈಕಿ ಅವರು 27 ಮತಗಳನ್ನು ಪಡೆದು ಗಮನ ಸೆಳೆದರು.
ಜೆಡಿಎಸ್ ಅಭ್ಯರ್ಥಿ ಗೋವಿಂದರಾಜ್ 14 ಮತಗಳಿಗೆ ಸೀಮಿತರಾದರು. ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ವಿನಯ್ ಕಾರ್ತಿಕ್ 32 ಮತ ಪಡೆದು ಅತಿ ಹೆಚ್ಚು ಮತ ಗಳಿಸಿದ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಪಿ.ವಿ. ಮೋಹನ್ 29 ಮತ ಪಡೆದರೆ, ಉಳಿದ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು ತಲಾ 30 ಮತ ಪಡೆದರು.
222 ಶಾಸಕರ ಪೈಕಿ 221 ಮತಗಳು ಸಿಂಧು ಆಗಿವೆ. ಬಿಜೆಪಿಯಲ್ಲಿ ಈಗಾಗಲೇ ಉಚ್ಚಾಟನೆಗೊಂಡ ಶಾಸಕರನ್ನು ಹೊರತುಪಡಿಸಿ ನಾಲ್ವರು ಅಡ್ಡಮತದಾನ ಮಾಡಿರುವುದು ರಾಜ್ಯ ಬಿಜೆಪಿ ಪಾಲಿಗೆ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ. ಈ ಫಲಿತಾಂಶವು ಬಿಜೆಪಿ–ಜೆಡಿಎಸ್ ಮೈತ್ರಿಗೆ ದೊಡ್ಡ ಹಿನ್ನಡೆ ಆಗಿದ್ದು, ಅದರ ರಾಜಕೀಯ ಪರಿಣಾಮ ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪಷ್ಟ ಆಗುವ ಸಾಧ್ಯತೆ ಇದೆ.
What do you feel about this post?
Like
Love
Happy
Haha
Sad
