ರಾಷ್ಟ್ರೀಯ ಲೋಕ ಅದಾಲತ್‌ ಸೆ.19ಕ್ಕೆ, ರಾಜೀ ಸಂಧಾನದ ಮೂಲಕ ಶೀಘ್ರ ಇತ್ಯರ್ಥ: ನ್ಯಾಯಾಧೀಶ ಬಸವರಾಜ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ

Spread the love

ಮಂಗಳೂರು: ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸುವ ರಾಷ್ಟ್ರೀಯ ಲೋಕ ಅದಾಲತ್‌ ಸೆ.19ರಂದು ಜಿಲ್ಲೆಯ ವಿವಿಧ ನ್ಯಾಯಾಲಯಗಳ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಬಸವರಾಜ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

<

ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ಮತ್ತು ಸುಳ್ಯ ನ್ಯಾಯಾಲಯಗಳ ಆವರಣದಲ್ಲಿ ಮಧ್ಯಾಹ್ನ 2.30ರಿಂದ ಲೋಕ ಅದಾಲತ್‌ ನಡೆಯಲಿದೆ ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ದಾಖಲಾಗದ ಹಾಗೂ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ತ್ವರಿತವಾಗಿ ಬಗೆಹರಿಸಿಕೊಳ್ಳಲು ಇದು ಉತ್ತಮ ಅವಕಾಶ. ನ್ಯಾಯಾಧೀಶರು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ, ಎರಡೂ ಕಡೆಯವರಿಗೆ ರಾಜೀ ಸಂಧಾನದ ಕುರಿತು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಮೋಟಾರು ವಾಹನ ಅಪಘಾತ ಪರಿಹಾರ, ಚೆಕ್‌ ಅಮಾನ್ಯ, ಬ್ಯಾಂಕ್‌ ಸಾಲ ವಸೂಲಾತಿ, ಅಕ್ರಮ ಮರಳು ಸಾಗಾಟ, ಕಾರ್ಮಿಕ ಮತ್ತು ನಷ್ಟ ಪರಿಹಾರ ವಿವಾದ, ವಿಚ್ಛೇದನ ಹೊರತುಪಡಿಸಿದ ವೈವಾಹಿಕ ಹಾಗೂ ಜೀವನಾಂಶ ಪ್ರಕರಣ, ಗ್ರಾಹಕರ ವಿವಾದ, ಭೂಸ್ವಾಧೀನ ಮತ್ತು ಪರಿಹಾರ ಹಂಚಿಕೆ, ವಿದ್ಯುತ್‌ ಹಾಗೂ ನೀರಿನ ಶುಲ್ಕ, ವೇತನ–ಭತ್ಯೆ, ಸೇವಾ ಹಾಗೂ ಪಿಂಚಣಿ ಪ್ರಕರಣಗಳು, ಜನನ ಪ್ರಮಾಣಪತ್ರ ಸೇರಿದಂತೆ ಕಾನೂನಿನ ಪ್ರಕಾರ ರಾಜೀ ಮಾಡಿಕೊಳ್ಳಬಹುದಾದ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲೆಯ ನ್ಯಾಯಾಲಯಗಳಲ್ಲಿ ಸೆ.19ರ ವೇಳೆಗೆ ಒಟ್ಟು 56,727 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ. ಈ ಪೈಕಿ 8,515 ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಬಹುದಾದವು ಎಂದು ಗುರುತಿಸಲಾಗಿದೆ. 3,264 ಪ್ರಕರಣಗಳನ್ನು ಮುಂಬರುವ ಲೋಕ ಅದಾಲತ್‌ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಶಿಫಾರಸು ಮಾಡಲಾಗಿದ್ದು, 232 ಪ್ರಕರಣಗಳು ಇತ್ಯರ್ಥಕ್ಕೆ ಸಿದ್ಧವಾಗಿವೆ. ಈಗಾಗಲೇ 12 ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ತಿಳಿಸಿದರು.

ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡರೆ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುವುದು.ಲೋಕ ಅದಾಲತ್‌ನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ.ಕಡಿಮೆ ವೆಚ್ಚದಲ್ಲಿ ತ್ವರಿತವಾಗಿ ನ್ಯಾಯ ಪಡೆದು ಸಮಯ ಹಾಗೂ ಸಂಬಂಧಗಳನ್ನು ಉಳಿಸಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *