ಮಂಗಳೂರು: ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ವತಿಯಿಂದ ನಗರದ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಮೂರು ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ವಿಶೇಷ ಕೊಡುಗೆಯಾಗಿ ನೀಡಲಾಯಿತು.
ಆಸ್ಪತ್ರೆಯಲ್ಲಿ ರೋಗಿಗಳು, ವೈದ್ಯರು ಹಾಗೂ ಶುಶ್ರೂಷಕಿಯರಿಗೆ ಬಳಸುವ ಶಸ್ತ್ರಚಿಕಿತ್ಸಾ ಬಟ್ಟೆಗಳು ಹಾಗೂ ಇತರ ಅಗತ್ಯ ಬಟ್ಟೆಗಳಲ್ಲಿ ನ್ಯೂನತೆಗಳು ಕಂಡು ಬಂದ ಸಂದರ್ಭದಲ್ಲಿ ಅವುಗಳನ್ನು ದುರಸ್ತಿಪಡಿಸಿ, ಸುಸ್ಥಿತಿಯಲ್ಲಿ ಮರುಬಳಕೆ ಮಾಡಲು ಈ ಹೊಲಿಗೆ ಯಂತ್ರಗಳು ಸಹಕಾರಿ ಆಗಲಿವೆ. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗ, ಹೆರಿಗೆ ವಿಭಾಗ ಹಾಗೂ ನವಜಾತ ಶಿಶು ತೀವ್ರ ನಿಗಾ ಘಟಕಗಳಿಗೆ ಯಂತ್ರಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರು ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯ ಈ ಕೊಡುಗೆ ಕ್ರಿಯಾತ್ಮಕ ದೃಷ್ಟಿಕೋನದ ವೈಶಿಷ್ಟ್ಯಪೂರ್ಣ ನಿಲುವಾಗಿದೆ ಎಂದು ಬಣ್ಣಿಸಿದರು.
ಆಸ್ಪತ್ರೆಯಲ್ಲಿ ಬಳಸುವ ವಿವಿಧ ರೀತಿಯ ಶಸ್ತ್ರಚಿಕಿತ್ಸಾ ಬಟ್ಟೆಗಳಲ್ಲಿ ಸಣ್ಣಪುಟ್ಟ ನ್ಯೂನತೆಗಳು ಉಂಟಾದಾಗ ಅವುಗಳನ್ನು ಸಂಪೂರ್ಣವಾಗಿ ಬದಲಿಸುವ ಬದಲು ಹೊಲಿಗೆ ಯಂತ್ರದ ಮೂಲಕ ದುರಸ್ತಿಪಡಿಸಿ ಮತ್ತೆ ಮೂಲ ಸ್ವರೂಪದಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಆಸ್ಪತ್ರೆಯ ದಿನನಿತ್ಯದ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವುದರ ಜತೆಗೆ ಅನಗತ್ಯ ವೆಚ್ಚವನ್ನು ಕಡಿಮೆ ಮಾಡಲು ಸಹ ನೆರವಾಗಲಿದೆ. ರೆಡ್‌ಕ್ರಾಸ್ ಸಂಸ್ಥೆಯ ಈ ಕೊಡುಗೆ ಮಹೋನ್ನತ ಧ್ಯೇಯೋದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿ ಮುಖ್ಯಸ್ಥ ಸಿ.ಎ. ಶಾಂತಾರಾಮ ಶೆಟ್ಟಿ ಅವರು ಮಾತನಾಡಿ, ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ದೂರಗಾಮಿ ಪರಿಣಾಮ ಬೀರುವಂತಹ ಯೋಜನೆಗಳಿಗೆ ಪೂರಕವಾಗಿ ಸ್ಪಂದಿಸಲು ರೆಡ್‌ಕ್ರಾಸ್ ಸಂಸ್ಥೆ ಹೆಮ್ಮೆ ಪಡುತ್ತದೆ ಎಂದರು.
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಒದಗಿಸುವ ಕಾರ್ಯದಲ್ಲಿ ಸಾಧ್ಯವಾದಷ್ಟು ಸಹಕಾರ ನೀಡುವುದು ರೆಡ್‌ಕ್ರಾಸ್ ಸಂಸ್ಥೆಯ ಉದ್ದೇಶವಾಗಿದೆ. ಆಸ್ಪತ್ರೆಯ ಅಗತ್ಯಗಳಿಗೆ ಪೂರಕವಾಗಿ ಇಂತಹ ಉಪಯುಕ್ತ ಸಾಧನಗಳನ್ನು ಒದಗಿಸುವುದರಿಂದ ಸರ್ಕಾರದ ಆರ್ಥಿಕ ಸಂಪನ್ಮೂಲಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಪರೋಕ್ಷವಾಗಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಗುರುದತ್ತ, ಸಂಯೋಜಕ ಗಿರೀಶ್, ಲೇಡಿಗೋಷನ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್, ಹಿರಿಯ ತಜ್ಞ ಡಾ. ದಯಾನಂದ್, ಶುಶ್ರೂಷಾ ಅಧೀಕ್ಷಕಿ ಗೀತಾ ಹಾಗೂ ಮಲ್ಲಿಕಾ ಇದ್ದರು.
ಸಂಧ್ಯಾ ಪ್ರಾರ್ಥಿಸಿದರು. ಶುಶ್ರೂಷಾಧಿಕಾರಿಗಳಾದ ಅಂಬಿಕಾ ಮತ್ತು ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಪ್ರಭಾ ಸ್ವಾಗತಿಸಿದರು.
What do you feel about this post?
Like
Love
Happy
Haha
Sad





