ಅಧರ್ಮ, ಅನೀತಿ ವಿನಾಶ ಮಾಡಿದ ಮಹಾನ್ ಚೇತನ ಶ್ರೀಕೃಷ್ಣ: ಎಂ.ಎ. ಗಫೂರ್

ಜಿಲ್ಲಾ ಸುದ್ದಿ ಉಡುಪಿ ಕುಂದಾಪುರ

Spread the love

ಉಡುಪಿ: ಸಮಾಜದಲ್ಲಿ ಅಧರ್ಮ, ಅನೀತಿ ಹಾಗೂ ಕೆಟ್ಟ ವ್ಯವಸ್ಥೆ ಹೆಚ್ಚಾದಾಗ ಮಹಾನ್ ಚೇತನರು ಜನಿಸುತ್ತಾರೆ ಎಂಬುದಕ್ಕೆ ಶ್ರೀಕೃಷ್ಣ ಶ್ರೇಷ್ಠ ನಿದರ್ಶನ. ವಿಷ್ಣುವಿನ ಎಂಟನೇ ಅವತಾರವಾಗಿ ಜನಿಸಿದ ಶ್ರೀಕೃಷ್ಣ ಸಾವಿರಾರು ವರ್ಷಗಳ ಹಿಂದೆ ಸಮಾಜದಲ್ಲಿದ್ದ ಅಧರ್ಮ, ಅನೀತಿಯನ್ನು ವಿನಾಶ ಮಾಡಿದ ಮಹಾನ್ ಚೇತನ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.

ನಗರದ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ಶ್ರೀಕೃಷ್ಣನ ನಾಡಾಗಿದ್ದು, ಶ್ರೀಕೃಷ್ಣ ಜನ್ಮಾಷ್ಟಮಿ ಇಲ್ಲಿನ ಜನತೆಯ ಪ್ರಮುಖ ಹಬ್ಬವಾಗಿದೆ. ವೇಷಧಾರಿಗಳು ವಿವಿಧ ವೇಷ ತೊಟ್ಟು ನಗರದಾದ್ಯಂತ ಸಂಚರಿಸುವ ಮೂಲಕ ಹಬ್ಬಕ್ಕೆ ಮೆರುಗು ನೀಡಿದ್ದಾರೆ. ಕಲೆ ಮತ್ತು ಸಂಸ್ಕೃತಿ ಉಳಿದಾಗ ಸಮಾಜದಲ್ಲಿ ಸಾಮರಸ್ಯದಿಂದ ಬದುಕಲು ಸಾಧ್ಯ ಎಂದರು.

ವಿದ್ಯಾರ್ಥಿಗಳು ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಸಾರಿದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಗಫೂರ್ ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಅವರು ಮಾತನಾಡಿ, ದುಷ್ಟರ ಶಿಕ್ಷೆ ಹಾಗೂ ಶಿಷ್ಟರ ರಕ್ಷಣೆಗಾಗಿ ಶ್ರೀಕೃಷ್ಣ ಜನ್ಮತಾಳಿದ್ದು, ಕುರುಕ್ಷೇತ್ರದಲ್ಲಿ ಧರ್ಮಕ್ಕೆ ಜಯ ತಂದುಕೊಟ್ಟ ಆದರ್ಶ ಪುರುಷ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಭಗವದ್ಗೀತೆಯಲ್ಲಿರುವ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕಾಂತ್ ಸಿದ್ಧಾಪುರ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವರ್ಷಾ ಬಿ. ಕೋಟ್ಯಾನ್ ನಿರೂಪಿಸಿದರು. ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕೆ. ಪೂರ್ಣಿಮಾ ವಂದಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ಶಾಲೆಯ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *