ಕಾರವಾರ ತಾಲೂಕು ಅಭಿವೃದ್ಧಿಗೆ ₹1,500 ಕೋಟಿಗೂ ಅಧಿಕ ಅನುದಾನ: ಶಾಸಕ ಸತೀಶ್ ಸೈಲ್

ಜಿಲ್ಲಾ ಸುದ್ದಿ ಕಾರವಾರ ಶಿರಸಿ

Spread the love

ಕಾರವಾರ: ತಾಲೂಕಿನಲ್ಲಿ 2023-24ನೇ ಸಾಲಿನಿಂದ ಇದುವರೆಗೆ ವಿವಿಧ ಇಲಾಖೆಗಳ ಮೂಲಕ ರಸ್ತೆ, ಕಟ್ಟಡ, ಚರಂಡಿ, ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೌಲಭ್ಯಗಳಿಗಾಗಿ 1,500 ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ ಎಂದು ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ತಿಳಿಸಿದ್ದಾರೆ.

<

ಕಾರವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಿಡುಗಡೆಯಾಗಿರುವ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳು ಯಾವ ಹಂತದಲ್ಲಿವೆ ಎಂಬುದನ್ನು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಾಮಗಾರಿಗಳ ಪ್ರಗತಿಯ ಮಾಹಿತಿಯನ್ನು ಶಾಸಕರ ಕಚೇರಿ ಆವರಣದಲ್ಲಿ ಅಳವಡಿಸಿರುವ ಪರದೆ ಮೂಲಕ ಸಾರ್ವಜನಿಕರಿಗೆ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಕಾಮಗಾರಿ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ವಿವಿಧ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರ ಸಂಪೂರ್ಣ ಮಾಹಿತಿ ಒದಗಿಸುವಂತೆ ಸೂಚಿಸಿದ ಸತೀಶ್ ಸೈಲ್, ಹಲವು ಇಲಾಖೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ಇರುವ ಹಿನ್ನೆಲೆಯಲ್ಲಿ ಅಗತ್ಯ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಪರ್ಯಾಯ ಸಿಬ್ಬಂದಿ ನಿಯೋಜನೆ ಆಗುವವರೆಗೆ ವರ್ಗಾವಣೆ ಮಾಡಬಾರದು ಎಂದು ಸೂಚಿಸಿದರು.

ಕಾರವಾರ ನಗರದ ವಿದ್ಯುತ್ ಕಂಬಗಳಲ್ಲಿ ದೂರದರ್ಶನ ಹಾಗೂ ಇತರ ಕೇಬಲ್‌ಗಳು ಅಸ್ತವ್ಯಸ್ತವಾಗಿ ನೇತಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ವಿದ್ಯುತ್ ತಂತಿ ಹೊರತುಪಡಿಸಿ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಇತರ ಅನಗತ್ಯ ತಂತಿ ಹಾಗೂ ಕೇಬಲ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಾರವಾರ–ಕೈಗಾ ರಸ್ತೆ ಕಾಮಗಾರಿ ಸಂಪೂರ್ಣಗೊಳ್ಳುವವರೆಗೆ 30 ಟನ್‌ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆರ್‌ಟಿಒ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸತೀಶ್ ಸೈಲ್ ಸೂಚಿಸಿದರು.

ಕಾರವಾರ ತಾಲೂಕು ಕರಾವಳಿ ಪ್ರದೇಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಪ್ರಯೋಜನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದರು.

ಮೀನುಗಾರರಿಗೆ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ವಿತರಣೆ, ಸುರಕ್ಷತಾ ಕಿಟ್, ಮೀನು ಸಾಕಾಣಿಕೆ, ಪಂಜರ ಮೀನು ಕೃಷಿ ಸೇರಿದಂತೆ ವಿವಿಧ ಯೋಜನೆಗಳಡಿ ದೊರೆಯುವ ಸಹಾಯಧನದ ಕುರಿತು ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ರಾತ್ರಿ ವೇಳೆ ಉಪನ್ಯಾಸಕರನ್ನು ನಿಯೋಜಿಸಿ ವಿದ್ಯಾರ್ಥಿಗಳಿಗೆ ಪಾಠ ಹಾಗೂ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಹೇಳಿದರು.

ಹಳಗಾ, ಉಳಗಾ ಹಾಗೂ ಕದ್ರಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಎಲ್ಲ ದೇವಸ್ಥಾನಗಳಲ್ಲಿ ಅಗತ್ಯವಿರುವ ಕಡೆ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅರಣ್ಯ ಪ್ರದೇಶದ ಮೂಲಕ ನಿರ್ಮಾಣವಾಗುವ ರಸ್ತೆಗಳಿಗೆ ಡಾಂಬರ್ ಬದಲಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ತಾಲೂಕಿಗೆ ಇನ್ನಷ್ಟು ರಸ್ತೆ ಕಾಮಗಾರಿಗಳನ್ನು ತರಲು ಅಗತ್ಯ ಪ್ರಯತ್ನ ನಡೆಸಬೇಕು ಎಂದರು.

ಕಾರವಾರ ಹಾಗೂ ಸದಾಶಿವಗಡದಲ್ಲಿ ಭಾನುವಾರ ನಡೆಯುವ ಸಂತೆಗಳಲ್ಲಿ ವ್ಯಾಪಾರಿಗಳು ರಸ್ತೆಯ ಮೇಲೆಯೇ ತರಕಾರಿ ಹಾಗೂ ಇತರ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಹಾಗೂ ಅಪಘಾತದ ಸಾಧ್ಯತೆ ಇದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರವಾರದಲ್ಲಿ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಹಾಗೂ ಸದಾಶಿವಗಡದಲ್ಲಿ ರಸ್ತೆಯನ್ನು ಹೊರತುಪಡಿಸಿ ಸೂಕ್ತ ಸ್ಥಳದಲ್ಲಿ ಸಂತೆ ನಡೆಸಲು ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ 30ಕ್ಕೂ ಹೆಚ್ಚು ಶಾಲೆಗಳು ಬಂದ್ ಆಗಿರುವ ಕುರಿತು ಶಿಕ್ಷಣ ಇಲಾಖೆಯಿಂದ ಮಾಹಿತಿ ಪಡೆದ ಶಾಸಕ ಸೈಲ್, ಬಂದ್ ಆಗಿರುವ ಶಾಲೆಗಳ ಜಾಗ ಹಾಗೂ ಕಟ್ಟಡಗಳ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದರು.

ಬಳಕೆಯಲ್ಲಿಲ್ಲದ ಶಾಲಾ ಕಟ್ಟಡಗಳನ್ನು ಕ್ರೀಡಾ ಕ್ಲಬ್, ಗ್ರಂಥಾಲಯ ಸೇರಿದಂತೆ ಸಾರ್ವಜನಿಕ ಉಪಯೋಗದ ಚಟುವಟಿಕೆಗಳಿಗೆ ಬಾಡಿಗೆಗೆ ನೀಡುವ ಮೂಲಕ ಸ್ಥಳೀಯರಿಗೆ ಅನುಕೂಲ ಕಲ್ಪಿಸುವುದರ ಜತೆಗೆ ಸರ್ಕಾರಕ್ಕೆ ಆದಾಯ ಬರುವಂತೆ ಮಾಡಬಹುದು ಎಂದು ಸಲಹೆ ನೀಡಿದರು.

ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೋಮಶೇಖರ ಮೇಸ್ತಾ, ತಹಶೀಲ್ದಾರ್ ನಿಶ್ಚಲ್ ನರೋನಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ. ಏನಗಗೌಡರ್, ಪೌರಾಯುಕ್ತ ಜಗದೀಶ ಹುಲಗಜ್ಜಿ, ಡಿವೈಎಸ್‌ಪಿ ಗಿರೀಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ರಾಜೇಂದ್ರ ರಾಣೆ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *