ಮಂಗಳೂರು: ಗಣೇಶ ಚತುರ್ಥಿ ಸಂದರ್ಭದಲ್ಲಿ ಪರಿಸರ ಹಾಗೂ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಿ ನೈಸರ್ಗಿಕ ಜೇಡಿಮಣ್ಣು ಹಾಗೂ ಜೈವಿಕವಾಗಿ ವಿಘಟನೀಯ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನೇ ಬಳಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ಡಾ. ಮಂಜು ರಾಜಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಹಾಗೂ ರಾಸಾಯನಿಕ, ಭಾರಲೋಹ ಆಧಾರಿತ ಬಣ್ಣಗಳಿಂದ ಅಲಂಕರಿಸಿದ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲ. ಇವು ಜಲಮೂಲಗಳಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಮಾಡುವುದರ ಜತೆಗೆ ಪಾದರಸ, ಆರ್ಸೆನಿಕ್, ಸೀಸ, ಕ್ರೋಮಿಯಂ, ತಾಮ್ರ, ಕ್ಯಾಡ್ಮಿಯಂ, ಕೋಬಾಲ್ಟ್ ಹಾಗೂ ಸತುವು ಸೇರಿದಂತೆ ವಿಷಕಾರಿ ಭಾರಲೋಹಗಳನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಜಲಚರಗಳಿಗೆ ಹಾನಿಯಾಗುವುದರ ಜತೆಗೆ ಸಾರ್ವಜನಿಕ ಆರೋಗ್ಯಕ್ಕೂ ಅಪಾಯ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ನೈಸರ್ಗಿಕ, ಜೈವಿಕವಾಗಿ ವಿಘಟನೀಯ ಹಾಗೂ ಪರಿಸರ ಸ್ನೇಹಿ ವಸ್ತುಗಳಿಂದ, ವಿಶೇಷವಾಗಿ ನೈಸರ್ಗಿಕ ಜೇಡಿಮಣ್ಣಿನಿಂದ ತಯಾರಿಸಿದ ಮೂರ್ತಿಗಳಿಗೆ ಉತ್ತೇಜನ ನೀಡಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳು ಹಾಗೂ ಏಕಬಳಕೆಯ ಪ್ಲಾಸ್ಟಿಕ್ ಅಥವಾ ಉಷ್ಣನಿರೋಧಕ ಪ್ಲಾಸ್ಟಿಕ್‌ನಿಂದ ಲೇಪಿತ ಮೂರ್ತಿಗಳನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿಯೂ ಭಾರಲೋಹ ಆಧಾರಿತ ರಾಸಾಯನಿಕ ಬಣ್ಣಗಳಿಂದ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳು ಹಬ್ಬಕ್ಕೂ ಮುನ್ನವೇ ಮೂರ್ತಿ ತಯಾರಿಕಾ ಘಟಕಗಳು, ಸಂಗ್ರಹಣಾ ಸ್ಥಳಗಳು ಹಾಗೂ ಮಾರಾಟ ಕೇಂದ್ರಗಳನ್ನು ಪರಿಶೀಲಿಸಬೇಕು. ನಿಷೇಧಿತ ಮೂರ್ತಿಗಳನ್ನು ಜಪ್ತಿ ಮಾಡಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಮೂರ್ತಿ ವಿಸರ್ಜನೆಗೂ ಮುನ್ನ ಹೂವು, ಎಲೆ, ಬಟ್ಟೆ, ಅಲಂಕಾರಿಕ ವಸ್ತು ಹಾಗೂ ಇತರ ಪೂಜಾ ಸಾಮಗ್ರಿಗಳನ್ನು ಬೇರ್ಪಡಿಸಬೇಕು. ನಿಗದಿತ ವಿಸರ್ಜನಾ ಸ್ಥಳಗಳಲ್ಲಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಬಣ್ಣ ಗುರುತಿನ ಕಸದ ತೊಟ್ಟಿಗಳನ್ನು ವ್ಯವಸ್ಥೆ ಮಾಡಬೇಕು. ನಿಷೇಧಿತ ಮೂರ್ತಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ, ಬಳಕೆ ಅಥವಾ ವಿಸರ್ಜನೆಯಲ್ಲಿ ತೊಡಗುವವರ ವಿರುದ್ಧ ಘಟಕ ಮುಚ್ಚುವಿಕೆ, ಜಪ್ತಿ ಹಾಗೂ ಕಾರ್ಯಾಚರಣೆ ಸ್ಥಗಿತ ಸೇರಿದಂತೆ ಕಾನೂನು ಕ್ರಮ ಜರುಗಿಸಲಾಗುವುದು. ಇಂತಹ ಮೂರ್ತಿಗಳನ್ನು ಜಲಮೂಲಗಳಲ್ಲಿ ವಿಸರ್ಜಿಸುವುದು ಕಾನೂನು ಉಲ್ಲಂಘನೆಯಾಗಿದ್ದು, ದಂಡದ ಜತೆಗೆ ಜೈಲು ಶಿಕ್ಷೆಗೂ ಅವಕಾಶವಿದೆ ಎಂದು ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad





