ಕಾರವಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಪೊಲೀಸ್ ಸಿವಿಲ್ ಕಾನ್ ಸ್ಟೆಬಲ್ ನೇರ ನೇಮಕಾತಿ ಪರೀಕ್ಷೆ ಸಂಪೂರ್ಣ ಪಾರದರ್ಶಕ ಹಾಗೂ ಅಕ್ರಮ ಮುಕ್ತವಾಗಿ ನಡೆಸಲು ಎಲ್ಲ ಅಧಿಕಾರಿಗಳು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾರವಾರದ 15 ಹಾಗೂ ಅಂಕೋಲಾದ 5 ಸೇರಿ ಜಿಲ್ಲೆಯ 20 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 6,475 ಅಭ್ಯರ್ಥಿಗಳು ಹಾಜರಾಗಲಿದ್ದಾರೆ ಎಂದರು.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ, ಪ್ರಶ್ನೆಪತ್ರಿಕೆ ಹಾಗೂ ಉತ್ತರಪತ್ರಿಕೆ ಸಾಗಾಟಕ್ಕೆ ಪೊಲೀಸ್ ಭದ್ರತೆ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಭ್ಯರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಪರೀಕ್ಷಾ ದಿನ ಸಾರಿಗೆ ಸಮಸ್ಯೆಯಾಗದಂತೆ ಬಸ್ ವ್ಯವಸ್ಥೆ ಹಾಗೂ ವಿದ್ಯುತ್ ವ್ಯತ್ಯಯವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದರು.
ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಅಭ್ಯರ್ಥಿಗಳ ಡ್ರೆಸ್ ಕೋಡ್ ಮತ್ತು ನಿಷೇಧಿತ ವಸ್ತುಗಳ ಪರಿಶೀಲನೆ ಕಡ್ಡಾಯವಾಗಿದ್ದು, ಮಹಿಳೆಯರಿಗೆ ಪ್ರತ್ಯೇಕ ತಪಾಸಣಾ ಕೊಠಡಿ ವ್ಯವಸ್ಥೆ ಕಲ್ಪಿಸಬೇಕು. ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೂ ಕನಿಷ್ಠ ಎರಡು ಗಂಟೆಗಳ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು. ಮೊಬೈಲ್ ಫೋನ್, ಬ್ಲೂಟೂತ್, ಇಯರ್‌ಫೋನ್, ಕ್ಯಾಲ್ಕುಲೇಟರ್, ಕೈಗಡಿಯಾರ, ಬೆಲ್ಟ್, ಬ್ಯಾಗ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನ ಅಥವಾ ವೈಯಕ್ತಿಕ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಲು ಅವಕಾಶವಿರುವುದಿಲ್ಲ ಎಂದರು.
ಪೂರ್ಣ ತೋಳಿನ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗುವಂತಿಲ್ಲ. ಲೋಹದ ಆಭರಣಗಳನ್ನು ಧರಿಸಬಾರದು. ಆದರೆ ಮೂಗುತಿ ಹಾಗೂ ಮಂಗಳಸೂತ್ರಕ್ಕೆ ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳು ಬೂಟಿನ ಬದಲು ಚಪ್ಪಲಿ ಅಥವಾ ಸ್ಯಾಂಡಲ್ ಧರಿಸುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ಪರೀಕ್ಷೆ ಆರಂಭವಾದ ಬಳಿಕ ಪರೀಕ್ಷಾ ಕೊಠಡಿಗೆ ಪೊಲೀಸ್ ಅಧಿಕಾರಿಗಳಿಗೂ ಪ್ರವೇಶ ಇರುವುದಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶ ತಡೆಯಲು ಹಾಗೂ ವಾಹನಗಳ ದಾಖಲಾತಿಗೆ ವಿಶೇಷ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
What do you feel about this post?
Like
Love
Happy
Haha
Sad





