ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೋಗ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಹಿರಿಯ ಯೋಗಗುರು, ಬನ್ನೂರು ಗ್ರಾಮದ ನೆಕ್ಕಿಲ ನಿವಾಸಿ ಪ್ರಸಾದ್ ಪಾಣಾಜೆ (70) ಅವರು ಗುರುವಾರ ತೋಟದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರ ಇದ್ದಾರೆ.
ಪ್ರಸಾದ್ ಅವರು ಗುರುವಾರ ಬೆಳಿಗ್ಗೆ ತಮ್ಮ ತೋಟಕ್ಕೆ ಅಡಿಕೆ ಹೆಕ್ಕಲು ತೆರಳಿದ್ದರು. ಬಹಳ ಸಮಯವಾದರೂ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಅವರ ಪತ್ನಿ ತೋಟಕ್ಕೆ ತೆರಳಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ತೋಟದಲ್ಲಿರುವ ಕೆರೆಯ ನೀರಿನಲ್ಲಿ ಪ್ರಸಾದ್ ಅವರ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ.
ಅಡಿಕೆ ಹೆಕ್ಕಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವುದಾಗಿ ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಪಾಣಾಜೆ ನಿವಾಸಿಯಾಗಿದ್ದ ಪ್ರಸಾದ್ ಅವರು ಬೆಂಗಳೂರಿನ ಎಸ್.ವ್ಯಾಸ ಯೋಗ ವಿಶ್ವವಿದ್ಯಾಲಯದಲ್ಲಿ ಯೋಗ ಶಿಕ್ಷಣದ ಪ್ರಥಮ ಬ್ಯಾಚ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯೋಗಗುರು ಎಂದೇ ಗುರುತಿಸಿಕೊಂಡಿರುವ ಡಾ. ಎಚ್.ಆರ್. ನಾಗೇಂದ್ರ ಅವರಲ್ಲಿ ಯೋಗ ತರಬೇತಿ ಪಡೆದಿದ್ದರು.
1979ರಲ್ಲಿ ಪುತ್ತೂರಿನಲ್ಲಿ ಯೋಗ ಕೇಂದ್ರ ಸ್ಥಾಪನೆ
ಪ್ರಸಾದ್ ಪಾಣಾಜೆ ಅವರು 1979ರಲ್ಲಿ ಪುತ್ತೂರಿನಲ್ಲಿ ಯೋಗ ಕೇಂದ್ರ ಸ್ಥಾಪಿಸಿ ಯೋಗ ತರಬೇತಿ ನೀಡಲು ಆರಂಭಿಸಿದ್ದರು. ಬಳಿಕ ದಕ್ಷಿಣ ಕನ್ನಡ ಸೇರಿದಂತೆ ವಿವಿಧೆಡೆ ಲಕ್ಷಾಂತರ ಮಂದಿಗೆ ಯೋಗ ತರಬೇತಿ ನೀಡಿದ್ದ ಅವರು, ಹಲವು ಮಂದಿಯನ್ನು ಯೋಗ ಶಿಕ್ಷಕರಾಗಿ ರೂಪಿಸಿದ್ದರು.
ಪ್ರತಿ ವರ್ಷ ಪುತ್ತೂರಿನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಅದ್ಧೂರಿಯಾಗಿ ಆಯೋಜಿಸುವ ಮೂಲಕ ಯೋಗದ ಮಹತ್ವವನ್ನು ಜನರಿಗೆ ಪರಿಚಯಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದರು. ಯೋಗ ಕ್ಷೇತ್ರದಲ್ಲಿನ ಅವರ ಸೇವೆ ಮತ್ತು ಸಾಧನೆಗೆ ಸಹಸ್ರಾರು ಗೌರವ, ಸನ್ಮಾನಗಳು ಲಭಿಸಿದ್ದವು.
What do you feel about this post?
Like
Love
Happy
Haha
Sad





