ಮಂಗಳೂರು: ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ (ಕೆಸಿಡಿಎ) 68ನೇ ವಾರ್ಷಿಕ ಮಹಾಸಭೆ ಸೆ.6ರಂದು ಮಂಗಳೂರಿನ ದೇರೆಬೈಲ್ ಚರ್ಚ್ ಹಾಲ್‌ನಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಆತಿಥ್ಯದಲ್ಲಿ ನಡೆದ ಮಹಾಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಪ್ರತಿನಿಧಿಗಳು, ಜಿಲ್ಲಾ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡರು.
ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಚಟುವಟಿಕೆಗಳು ಹಾಗೂ ನಡೆದು ಬಂದ ಹಾದಿ ವಿವರಿಸಿ, ಪ್ರತಿನಿಧಿಗಳನ್ನು ಸ್ವಾಗತಿಸಿದರು. ಶಶಿಧರ ಪಳಂಗಾಯ ಅವರು ಕರಾವಳಿಯ ಸಾಂಪ್ರದಾಯಿಕ ವೈಶಿಷ್ಟ್ಯ, ಶ್ರೀಮಂತ ಪರಂಪರೆ, ಸಂಸ್ಕೃತಿ, ಕಲೆ, ಸಾಹಿತ್ಯ ಹಾಗೂ ವೈದ್ಯಕೀಯ ಸೇವಾ ಪರಂಪರೆಯ ಕುರಿತು ಸಭೆಗೆ ಪರಿಚಯ ನೀಡಿದರು.
ಕೆಸಿಡಿಎ ಅಧ್ಯಕ್ಷ ರಘುನಾಥ್ ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಎ.ಕೆ. ಜೀವನ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರಾವಳಿಯ ಫಲವಂತಿಕೆಯ ಸಂಕೇತವಾಗಿ ಭತ್ತ ತುಂಬಿದ ಕಳಸದಲ್ಲಿ ತೆಂಗಿನಕಾಯಿ ಇರಿಸುವ ಮೂಲಕ ಸಾಂಪ್ರದಾಯಿಕವಾಗಿ ಕಾರ್ಯಕ್ರಮ ಆರಂಭಿಸಲಾಯಿತು. ಬಳಿಕ ನಾಡಗೀತೆಯೊಂದಿಗೆ ಮಹಾಸಭೆ ಅಧಿಕೃತವಾಗಿ ಆರಂಭವಾಯಿತು.
ಕೆಸಿಡಿಎ ಉಪಾಧ್ಯಕ್ಷರಾದ ಬಿ.ಕೆ. ಪ್ರಸನ್ನ ಕುಮಾರ್ ಹಾಗೂ ಶಿವರಾಜ್ ಪಾಟೀಲ್, ಖಜಾಂಚಿ ಬಿ. ಉಮೇಶ್, ಸಹ ಕಾರ್ಯದರ್ಶಿ ಸತ್ಯನಾರಾಯಣ ಕೆಳಗಾರ್, ಸಂಘಟನಾ ಕಾರ್ಯದರ್ಶಿ ವಿಜಯ ಕುಮಾರ್ ಎಸ್. ಬುರುಲಿ, ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಹಾಗೂ ಕಾರ್ಯದರ್ಶಿ ಡಾ. ಎ.ಕೆ. ಜಮಾಲ್ ವೇದಿಕೆಯಲ್ಲಿದ್ದರು. ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು.
68ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಕೆಸಿಡಿಎ ಅಧ್ಯಕ್ಷ ರಘುನಾಥ್ ರೆಡ್ಡಿ, ಪ್ರಸ್ತುತ ಔಷಧಿ ವ್ಯಾಪಾರಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಹಾಗೂ ಅವುಗಳಿಂದ ಸಮಾಜದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಮಾತನಾಡಿದರು.
ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದಿರಿಸಿ ಅನುಮೋದನೆ ಪಡೆಯಲಾಯಿತು. ಔಷಧ ವ್ಯಾಪಾರ ಕ್ಷೇತ್ರದಲ್ಲಿರುವ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸುವ ಕುರಿತು ಕೆಸಿಡಿಎ ಪ್ರಧಾನ ಕಾರ್ಯದರ್ಶಿ ಎ.ಕೆ. ಜೀವನ್ ಮನವಿ ಮಂಡಿಸಿದರು. ಈ ಮನವಿಯನ್ನು ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮೂವರಿಗೆ ‘ಕೆಮಿಸ್ಟ್ ರತ್ನ ಪ್ರಶಸ್ತಿ’
ಔಷಧ ವ್ಯಾಪಾರ ಕ್ಷೇತ್ರದ ಮೂಲಕ ಸಾಮಾಜಿಕ ಅಭ್ಯುದಯಕ್ಕೆ ಸೇವೆ ಸಲ್ಲಿಸಿರುವ ಮೂವರು ಹಿರಿಯ ಫಾರ್ಮಸಿಸ್ಟ್‌ಗಳಿಗೆ ‘ಕೆಮಿಸ್ಟ್ ರತ್ನ ಪ್ರಶಸ್ತಿ–2026’ ನೀಡಿ ಗೌರವಿಸಲಾಯಿತು.
ಮಂಗಳೂರಿನ ಗಣೇಶ್ ಮೆಡಿಕಲ್ಸ್‌ನ ಸದಾನಂದ ಶೆಟ್ಟಿ, ಬಾಗಲಕೋಟೆಯ ಅಶೋಕ್ ಮೆಡಿಕಲ್ ಸ್ಟೋರ್ಸ್‌ನ ಅಶೋಕ್ ವಿ. ಬಿಜ್ಜಲ್ ಹಾಗೂ ಮಂಡ್ಯದ ಭಾರ್ಗವಿ ಫಾರ್ಮ್‌ನ ಕೆ. ಪ್ರಭಾಕರನ್ ಪ್ರಶಸ್ತಿ ಸ್ವೀಕರಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ 68ನೇ ವಾರ್ಷಿಕ ಮಹಾಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
What do you feel about this post?
Like
Love
Happy
Haha
Sad




