ಸಿಪಿಸಿ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿಗಳ ಸಂಘದ 28ನೇ ವಾರ್ಷಿಕ ಮಹಾಸಭೆ, ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಾಲನೆ ಬೇಡ: ಜೆ.ಪಿ. ಗಂಗಾಧರ್

ಜಿಲ್ಲಾ ಸುದ್ದಿ ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮೈಸೂರು: ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿಗಳ ಸಂಘದ 28ನೇ ವಾರ್ಷಿಕ ಮಹಾಸಭೆ ನಗರದ ಸಂಘದ ಕಟ್ಟಡದಲ್ಲಿ ನಡೆಯಿತು.

ಸಂಸ್ಥೆಯ ಪ್ರಾಂಶುಪಾಲೆ ರಾಜೇಶ್ವರಿ ಎಂ.ಯು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ. ಡಿ. ಆನಂದ್ ಹಾಗೂ ಎಸ್. ಅನಂತ್ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಎನ್.ಎಸ್. ಬಸವರಾಜ್ ಸ್ವಾಗತಿಸಿದರು. ಬಳಿಕ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.

15 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ 15 ವಿದ್ಯಾರ್ಥಿಗಳಿಗೆ ತಲಾ ₹5,000 ನಗದು ಬಹುಮಾನ ನೀಡಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಇದೇ ಸಂದರ್ಭದಲ್ಲಿ 70 ವರ್ಷ ಪೂರೈಸಿದ 15 ಹಿರಿಯ ಸದಸ್ಯರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಹಿರಿಯ ಸದಸ್ಯರ ಸೇವೆ, ಕೊಡುಗೆ ಹಾಗೂ ಸಂಘದೊಂದಿಗಿನ ನಿರಂತರ ಬಾಂಧವ್ಯವನ್ನು ಸ್ಮರಿಸಲಾಯಿತು. ಸಂಘದ ಅಧ್ಯಕ್ಷರು, ಗೌರವಾಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳು ಸಂಘದ ಲಾಂಛನವನ್ನು ಅನಾವರಣಗೊಳಿಸಿದರು.

ಸಂಚಾರ ನಿಯಮ ಪಾಲನೆಗೆ ಮನವಿ

ಕಾರ್ಯಕ್ರಮದಲ್ಲಿ ಜೆ.ಪಿ. ಗಂಗಾಧರ್ ಅವರು ಮಾತನಾಡಿ, 18 ವರ್ಷ ಪೂರ್ಣಗೊಳ್ಳದ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡದಂತೆ ಪೋಷಕರು ಹಾಗೂ ಹಿರಿಯರು ಜಾಗರೂಕರಾಗಬೇಕು ಎಂದು ಮನವಿ ಮಾಡಿದರು.

ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಾಲನೆಗೆ ಅವಕಾಶ ನೀಡುವುದರಿಂದ ಅಪಘಾತ, ಅಕಾಲಿಕ ಮರಣ ಹಾಗೂ ಅಂಗವೈಕಲ್ಯಕ್ಕೆ ಕಾರಣವಾಗಬಹುದು. ಹೀಗಾಗಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದರು.

ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್‌ ಬಳಸದೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಮ್ಮ ಹಾಗೂ ಬಂಧು–ಮಿತ್ರರ ಜೀವದ ಸುರಕ್ಷತೆಗೆ ಆದ್ಯತೆ ನೀಡಿ ಆರೋಗ್ಯಕರ ಮತ್ತು ಸಂತಸದ ಜೀವನ ನಡೆಸುವಂತೆ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಲಚಂದರ್, ಜಯರಾಮ್ ಎನ್., ಕೀರ್ತಿನಾರಾಯಣ್, ಗಂಗಾಧರ್ ಜೆ.ಪಿ., ರವಿ ಎಚ್.ಎನ್., ಮಲೆಮಾದಪ್ಪ ಪಿ., ಫಿಲೋಮಿನಾ ರಾಜ್, ಪುರಂದರದಾಸ್, ಶ್ರೀಪತಿ, ಡಾ. ಅರಸುಕುಮಾರ್ ಎಂ.ಆರ್., ಪುಷ್ಪಾ ಯು. ಹಾಗೂ ಕಾರ್ಯದರ್ಶಿ ಟಿ.ವಿ. ನಾಗರಾಜ್ ಸೇರಿದಂತೆ ಸದಸ್ಯರು ಇದ್ದರು.

ಶೈಕ್ಷಣಿಕ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು, ಹಿರಿಯ ಸದಸ್ಯರನ್ನು ಗೌರವಿಸುವುದು ಹಾಗೂ ಹಳೆಯ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮೂಲಕ ಮಹಾಸಭೆ ಅರ್ಥಪೂರ್ಣವಾಗಿ ನಡೆಯಿತು.

Leave a Reply

Your email address will not be published. Required fields are marked *