ಮಂಗಳೂರು: ಸ್ವಲೀನತೆ ಹಾಗೂ ನಿರ್ದಿಷ್ಟ ಕಲಿಕಾ ತೊಂದರೆ ಹೊಂದಿರುವ ಮಕ್ಕಳಿಗೆ ಶಿಕ್ಷಣ, ಚಿಕಿತ್ಸೆ ಮತ್ತು ಕೌಶಲಾಭಿವೃದ್ಧಿಯನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಮಂಗಳೂರಿನ ಶಕ್ತಿನಗರದ ಸಾನಿಧ್ಯ ಸಂಸ್ಥೆಯಲ್ಲಿ ಅರ್ಜುನ್ ಶೆಟ್ಟಿ ಸ್ಮರಣಾರ್ಥ ವಿಶೇಷ ಶಾಲೆ ಆರಂಭಿಸಲಾಗುತ್ತಿದ್ದು, ಶಾಲೆಯ ಉದ್ಘಾಟನಾ ಸಮಾರಂಭ ಇದೇ 8 ರಂದು ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅರ್ಜುನ್ ಶೆಟ್ಟಿ ಪ್ರತಿಷ್ಠಾನದ ಸ್ಥಾಪಕ ಸುಧೀರ್ ಶೆಟ್ಟಿ ಅವರು ತಿಳಿಸಿದರು.
ತಮ್ಮ ಪುತ್ರ ಅರ್ಜುನ್ ಶೆಟ್ಟಿ ಅವರ ಸ್ಮರಣಾರ್ಥ ಈ ಶಾಲೆ ಆರಂಭಿಸಲಾಗುತ್ತಿದೆ. ಸ್ವಲೀನತೆ ಹಾಗೂ ನಿರ್ದಿಷ್ಟ ಕಲಿಕಾ ತೊಂದರೆ ಹೊಂದಿರುವ ಮಕ್ಕಳಿಗೆ ಅಗತ್ಯವಿರುವ ವಿವಿಧ ಚಿಕಿತ್ಸಾ ಸೇವೆಗಳು, ವಿಶೇಷ ಶಿಕ್ಷಣ, ಪುನರ್ವಸತಿ ಹಾಗೂ ಜೀವನ ಕೌಶಲ ತರಬೇತಿ ನೀಡಲಾಗುವುದು. ರಾಜ್ಯ ಹಾಗೂ ರಾಷ್ಟ್ರೀಯ ಮುಕ್ತ ಶಾಲೆಗಳ ಸಹಯೋಗದಲ್ಲಿ ಪದವಿ ಪೂರ್ವ ಹಂತದವರೆಗೆ ಶಿಕ್ಷಣ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಅಗಸ್ಟ್ 8 ರಂದು ಬೆಳಿಗ್ಗೆ 9.20 ಕ್ಕೆ ನಡೆವ ಕಾರ್ಯಕ್ರಮದಲ್ಲಿ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಶಾಲೆಯನ್ನು ಉದ್ಘಾಟಿಸಲಿದ್ದಾರೆ. ಸ್ಥಳೀಯ ಶಾಸಕರು, ಸಂಸದರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಾನಿಧ್ಯ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ವಸಂತ ಕುಮಾರ್ ಶೆಟ್ಟಿ ಅವರು ಮಾತನಾಡಿ, 2003ರಲ್ಲಿ ಕೇವಲ ಇಬ್ಬರು ಮಕ್ಕಳು ಹಾಗೂ ಒಬ್ಬ ಶಿಕ್ಷಕಿಯೊಂದಿಗೆ ಆರಂಭವಾದ ಸಂಸ್ಥೆ ಇಂದು 211 ಭಿನ್ನ ಸಾಮರ್ಥ್ಯದ ಮಕ್ಕಳಿಗೆ ವಿಶೇಷ ಶಿಕ್ಷಣ ಮತ್ತು ತರಬೇತಿ ನೀಡುತ್ತಿದೆ. ಸಂಸ್ಥೆಯಲ್ಲಿ ಸುಮಾರು 75 ವಿಶೇಷ ಶಿಕ್ಷಕರು, ಚಿಕಿತ್ಸಾ ತಜ್ಞರು, ಮನಃಶಾಸ್ತ್ರಜ್ಞರು, ಶಿಕ್ಷಕೇತರ ಸಿಬ್ಬಂದಿ ಹಾಗೂ ಪರಿಚಾರಕರು ಸೇವೆ ಸಲ್ಲಿಸುತ್ತಿದ್ದು, ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ಹಾಗೂ ಪುನರ್ವಸತಿ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ವಿಶೇಷ ಶಾಲೆಗಳಿಗೆ ಸರ್ಕಾರ 2024ರಲ್ಲಿ ಅನುದಾನ ಹೆಚ್ಚಿಸಿದರೂ ಕಳೆದ ನಾಲ್ಕು ತಿಂಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಪ್ರಸ್ತುತ ವಿಶೇಷ ಶಿಕ್ಷಕರಿಗೆ 20,250, ಶಿಕ್ಷಕೇತರ ಸಿಬ್ಬಂದಿಗೆ 13,000 ಹಾಗೂ ಕಾವಲುಗಾರರಿಗೆ 9,000 ವೇತನ ನೀಡಲಾಗುತ್ತಿದೆ. ಕಡಿಮೆ ವೇತನದಿಂದ ಶಿಕ್ಷಕರು ಹಾಗೂ ಸಿಬ್ಬಂದಿ ಉಳಿಸಿಕೊಳ್ಳುವುದು ಕಷ್ಟವಾಗುತ್ತಿದ್ದು, ವಿಶೇಷವಾಗಿ ವಸತಿ ವ್ಯವಸ್ಥೆ ಹೊಂದಿರುವ ವಿಶೇಷ ಶಾಲೆಗಳು ಸಿಬ್ಬಂದಿ ಕೊರತೆ ಎದುರಿಸುತ್ತಿವೆ ಎಂದರು.
ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಹಾಗೂ ವೇಣು ಇದ್ದರು.
What do you feel about this post?
Like
Love
Happy
Haha
Sad





