ಉಡುಪಿ: ಜಿಲ್ಲಾ ಆಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲಾಗುತ್ತಿದ್ದು, ಆಸ್ಪತ್ರೆಗಳ ಕಾರ್ಯನಿರ್ವಹಣೆ ಹಾಗೂ ವೈದ್ಯಕೀಯ ಸೇವೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ (ಜಿಲ್ಲಾ ಸರ್ಜನ್) ಡಾ. ಅಶೋಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯ ಇರುವ ವೈದ್ಯಕೀಯ ಸೌಲಭ್ಯಗಳು ಹಾಗೂ ಎರಡು ವರ್ಷಗಳಲ್ಲಿ ಒದಗಿಸಿರುವ ಆರೋಗ್ಯ ಸೇವೆಗಳ ವಿವರಗಳನ್ನು ನೀಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭದಲ್ಲಿ 6 ಹಾಸಿಗೆಗಳ ತೀವ್ರ ನಿಗಾ ಘಟಕ (ಐಸಿಯು) ಕಾರ್ಯನಿರ್ವಹಿಸುತ್ತಿತ್ತು. ಕೋವಿಡ್ ಸಂದರ್ಭದಲ್ಲಿ ದಾನಿಗಳ ಸಹಕಾರದಿಂದ ಇದನ್ನು 16 ಹಾಸಿಗೆಗಳಿಗೆ ವಿಸ್ತರಿಸಿ, ಇಂದಿಗೂ ಸಾರ್ವಜನಿಕರಿಗೆ ಸೇವೆ ಒದಗಿಸಲಾಗುತ್ತಿದೆ. ಮಾನವ ಸಂಪನ್ಮೂಲದ ಲಭ್ಯತೆ ಮೂಲತಃ 6 ಹಾಸಿಗೆಗಳಿಗೆ ಸೀಮಿತವಾಗಿದ್ದರೂ, ಐದು ನರ್ಸಿಂಗ್ ಕಾಲೇಜುಗಳ ಸಹಕಾರ, ಮಣಿಪಾಲದ ಕೆಎಂಸಿ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯಕೀಯ ತಜ್ಞರು ಹಾಗೂ ಹೆಚ್ಚುವರಿಯಾಗಿ ಎ.ಜೆ. ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರ ಸಹಕಾರದೊಂದಿಗೆ ಐಸಿಯು ಸೇವೆಗಳನ್ನು ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
2025ರ ಜನವರಿಯಿಂದ ಡಿಸೆಂಬರ್ವರೆಗೆ ಐಸಿಯುನಲ್ಲಿ 1,749 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, 843 ಮಂದಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. 2026ರ ಜನವರಿಯಿಂದ ಅಕ್ಟೋಬರ್ವರೆಗೆ 1,154 ರೋಗಿಗಳಿಗೆ ಐಸಿಯು ಚಿಕಿತ್ಸೆ ನೀಡಿದ್ದು, 694 ಮಂದಿ ವೆಂಟಿಲೇಟರ್ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯು 70 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಸರಾಸರಿ ಪ್ರತಿದಿನ 150 ರಿಂದ 200 ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ತಿಂಗಳಿಗೆ ಸುಮಾರು 120 ರಿಂದ 150 ಹೆರಿಗೆಗಳು ನಡೆಯುತ್ತಿವೆ. 2025ರಲ್ಲಿ 652 ಸಾಮಾನ್ಯ ಹೆರಿಗೆ ಹಾಗೂ 820 ಸಿಸೇರಿಯನ್ ಹೆರಿಗೆಗಳು ನಡೆದಿದ್ದರೆ, 2026ರ ಜನವರಿಯಿಂದ ಅಕ್ಟೋಬರ್ವರೆಗೆ 626 ಸಾಮಾನ್ಯ ಹೆರಿಗೆ ಹಾಗೂ 659 ಸಿಸೇರಿಯನ್ ಹೆರಿಗೆಗಳು ನಡೆದಿವೆ ಎಂದು ತಿಳಿಸಿದ್ದಾರೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಗತ್ಯ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಯಾವುದೇ ರೋಗಿಯನ್ನು ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸುತ್ತಿಲ್ಲ. 2025ರಲ್ಲಿ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ 48,496 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, 2026ರ ಮೊದಲ ಹತ್ತು ತಿಂಗಳಲ್ಲಿ 45,864 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಇದೇ ಅವಧಿಗಳಲ್ಲಿ ಕ್ರಮವಾಗಿ 1,06,209 ಹಾಗೂ 2,24,065 ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವಿಕಿರಣ ಶಾಸ್ತ್ರ ವಿಭಾಗದ ಮೂಲಕವೂ ರೋಗಿಗಳಿಗೆ ಸೇವೆ ಒದಗಿಸಲಾಗುತ್ತಿದೆ. 2026ರ ಜನವರಿಯಿಂದ ಅಕ್ಟೋಬರ್ವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 1,022 ರೋಗಿಗಳಿಗೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 6,410 ರೋಗಿಗಳಿಗೆ ಸ್ಕ್ಯಾನಿಂಗ್ ಮಾಡಲಾಗಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 2025ರಲ್ಲಿ 7,290 ಮಂದಿಗೆ ಸ್ಕ್ಯಾನಿಂಗ್ ಸೇವೆ ನೀಡಲಾಗಿತ್ತು. ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಸ್ಪತ್ರೆಯಲ್ಲಿ 2025ರಲ್ಲಿ 3,160 ಮಂದಿಗೆ ಹಾಗೂ 2026ರ ಮೊದಲ ಹತ್ತು ತಿಂಗಳಲ್ಲಿ 2,842 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಹಾವು ಕಡಿತಕ್ಕೆ ಸಂಬಂಧಿಸಿದಂತೆ ಇದೇ ಅವಧಿಗಳಲ್ಲಿ ಕ್ರಮವಾಗಿ 81 ಹಾಗೂ 93 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 2025ರಲ್ಲಿ 2,355 ರೋಗಿಗಳನ್ನು ಉನ್ನತ ಮಟ್ಟದ ಚಿಕಿತ್ಸೆಗಾಗಿ ನೋಂದಾಯಿತ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. 2026ರ ಜನವರಿಯಿಂದ ಅಕ್ಟೋಬರ್ವರೆಗೆ 2,304 ರೋಗಿಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಸಿಟಿ ಸ್ಕ್ಯಾನ್, ಎಂಆರ್ಐ ಹಾಗೂ ಡಯಾಲಿಸಿಸ್ ಸೇವೆಗಳನ್ನು ಒದಗಿಸಲಾಗುತ್ತಿದೆ. 2025ರಲ್ಲಿ 2,933 ಮಂದಿಗೆ ಸಿಟಿ ಸ್ಕ್ಯಾನ್ ಹಾಗೂ 1,217 ಮಂದಿಗೆ ಎಂಆರ್ಐ ಸೇವೆ ನೀಡಲಾಗಿದೆ. 2026ರ ಮೊದಲ ಹತ್ತು ತಿಂಗಳಲ್ಲಿ ಕ್ರಮವಾಗಿ 2,095 ಹಾಗೂ 1,401 ಮಂದಿ ಈ ಸೇವೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಡಯಾಲಿಸಿಸ್ ಘಟಕದಲ್ಲಿ 9 ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, 2025ರಲ್ಲಿ 8,014 ಡಯಾಲಿಸಿಸ್ ಚಿಕಿತ್ಸಾ ಅವಧಿಗಳನ್ನು ನಡೆಸಲಾಗಿದೆ. 2026ರ ಜನವರಿಯಿಂದ ಅಕ್ಟೋಬರ್ವರೆಗೆ 714 ರೋಗಿಗಳಿಗೆ ಒಟ್ಟು 6,991 ಚಿಕಿತ್ಸಾ ಅವಧಿಗಳಲ್ಲಿ ಡಯಾಲಿಸಿಸ್ ಮಾಡಲಾಗಿದೆ. ಈ ಘಟಕದಲ್ಲಿ ದಿನದ 24 ಗಂಟೆಯೂ ಸೇವೆ ಲಭ್ಯವಿದೆ ಎಂದು ತಿಳಿಸಿದ್ದಾರೆ.
ವಾರಸುದಾರರಿಲ್ಲದ ರೋಗಿಗಳಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 2025ರಲ್ಲಿ ಇಂತಹ 116 ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗಿದೆ. ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಉಚಿತವಾಗಿ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರದ ನಿಯಮಾನುಸಾರ ಬಳಕೆದಾರರ ಶುಲ್ಕ ಪಡೆದು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ನಿರಂತರವಾಗಿ ಆರೋಗ್ಯ ಸೇವೆ ನೀಡಲಾಗುತ್ತಿದೆ. ಆಸ್ಪತ್ರೆಗಳ ಸೇವೆಗಳ ಬಗ್ಗೆ ವಾಸ್ತವಾಂಶಗಳನ್ನು ತಿಳಿದುಕೊಳ್ಳದೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತದೆ. ಆದ್ದರಿಂದ ಇಂತಹ ಸುಳ್ಳು ಮಾಹಿತಿಗಳಿಗೆ ಸಾರ್ವಜನಿಕರು ಕಿವಿಗೊಡದೆ, ಆಸ್ಪತ್ರೆಯಲ್ಲಿ ಲಭ್ಯವಿರುವ ಸರ್ಕಾರಿ ಆರೋಗ್ಯ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.





