ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅಡಿಕೆ ಬೆಳೆಗೆ ಬಾಧಿಸುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ ಕೊಳೆರೋಗಗಳ ನಿಯಂತ್ರಣಕ್ಕೆ ವೈಜ್ಞಾನಿಕ ಸಂಶೋಧನೆ, ಕ್ಷೇತ್ರ ಸಮೀಕ್ಷೆ ಮತ್ತು ಸಮಗ್ರ ರೋಗ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ ಎಂದು ಸಂಸದ ಕ್ಯಾ ಬ್ರಿಜೇಶ್ ಚೌಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ನಿಯಮ 377ರ ಅಡಿಯಲ್ಲಿ ಅಡಿಕೆ ರೋಗಗಳ ಸಮಸ್ಯೆ ಕುರಿತು ಪ್ರಸ್ತಾಪಿಸಿದ್ದ ವಿಷಯಕ್ಕೆ ಉತ್ತರಿಸಿದ ಸಚಿವರು, ಕಾಸರಗೋಡಿನ ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಐಸಿಎಆರ್–ಸಿಪಿಸಿಆರ್‌ಐ) ಮೂಲಕ ನಡೆಯುತ್ತಿರುವ ವಿವಿಧ ಕ್ರಮಗಳ ವಿವರಗಳನ್ನು ನೀಡಿದ್ದಾರೆ ಎಂದರು.
ಬೆಳ್ತಂಗಡಿ, ಸುಳ್ಯ ಸೇರಿದಂತೆ ಏಳು ಕ್ಲಸ್ಟರ್‌ಗಳಲ್ಲಿ ಶಿಫಾರಸು ಮಾಡಲಾದ ಸಮಗ್ರ ರೋಗ ನಿರ್ವಹಣಾ ಪದ್ಧತಿಗಳ ಕ್ಷೇತ್ರ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಈ ಕ್ರಮಗಳನ್ನು ಅಳವಡಿಸಿಕೊಂಡ ಬಳಿಕ ರೋಗಬಾಧಿತ ಅಡಿಕೆ ತೋಟಗಳಲ್ಲಿ ರೋಗದ ತೀವ್ರತೆ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ ಎಂದರು.
ಅಡಿಕೆಗೆ ಬಾಧಿಸುವ ಕೊಳೆರೋಗ ನಿಯಂತ್ರಣಕ್ಕಾಗಿ ಮುಂಗಾರು ಆರಂಭಕ್ಕೂ ಮುನ್ನ ಹಾಗೂ ಮುಂಗಾರು ಅವಧಿಯಲ್ಲಿ ಶಿಫಾರಸು ಮಾಡಲಾದ ಶಿಲೀಂಧ್ರನಾಶಕಗಳನ್ನು ಸೂಕ್ತ ಸಮಯದಲ್ಲಿ ಬಳಸುವ ಮುನ್ನೆಚ್ಚರಿಕಾ ಕ್ರಮಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕ್ರಮಗಳನ್ನು ಅನುಸರಿಸಿದ ಬಳಿಕ ರೋಗದ ಪ್ರಮಾಣ ಕಡಿಮೆಯಾಗಿರುವುದರ ಜತೆಗೆ ಅಡಿಕೆ ಇಳುವರಿಯಲ್ಲೂ ಸುಧಾರಣೆ ಕಂಡುಬಂದಿದೆ ಎಂದು ಕ್ಷೇತ್ರ ಅಧ್ಯಯನಗಳು ತೋರಿಸಿವೆ ಎಂದು ಚೌಹಾಣ್ ಅವರು ತಿಳಸಿದ್ದಾರೆ ಎಂದರು.
ಹಳದಿ ಎಲೆ ರೋಗದ ನಿಯಂತ್ರಣ, ಗುಣಮಟ್ಟದ ಸಸಿ ನೆಡುವ ವ್ಯವಸ್ಥೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಂಶೋಧನೆ ನಡೆಯುತ್ತಿದೆ. ರೋಗದ ಪ್ರಮಾಣ ಕಡಿಮೆ ಇರುವ ಪ್ರದೇಶಗಳ ರೈತರ ತೋಟಗಳಲ್ಲಿ ಸಮಗ್ರ ನಿರ್ವಹಣಾ ಕ್ರಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗುತ್ತಿದ್ದು, ಇದಕ್ಕೆ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ಸಹಕಾರವೂ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ ಎಂದರು.
ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಸೇರಿದಂತೆ ಪ್ರಮುಖ ಅಡಿಕೆ ಬೆಳೆಯುವ ಜಿಲ್ಲೆಗಳಲ್ಲಿ ವರದಿ ಆಗಿರುವ ಎಲೆಚುಕ್ಕೆ ರೋಗದ ಸಮಸ್ಯೆಯ ಬಗ್ಗೆಯೂ ಕೃಷಿ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. 2022ರ ನವೆಂಬರ್‌ನಲ್ಲಿ ರಚಿಸಲಾಗಿದ್ದ ರಾಷ್ಟ್ರೀಯ ಅಡಿಕೆ ವೈಜ್ಞಾನಿಕ ಸಮಿತಿಯು ಅಡಿಕೆ ರೋಗಗಳ ಕುರಿತು ಕ್ಷೇತ್ರ ಸಮೀಕ್ಷೆ ನಡೆಸಿ, ರೈತರು ಹಾಗೂ ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದೆ. ವೈಜ್ಞಾನಿಕ ಮೌಲ್ಯಮಾಪನದ ಆಧಾರದ ಮೇಲೆ ಸಮಗ್ರ ರೋಗ ನಿರ್ವಹಣಾ ಕಾರ್ಯತಂತ್ರಗಳನ್ನು ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ ಎಂದರು.
ಸಮಗ್ರ ತೋಟಗಾರಿಕಾ ಅಭಿವೃದ್ಧಿ ಮಿಷನ್ ಅಡಿಯಲ್ಲಿ ರೋಗಬಾಧಿತ ಪ್ರದೇಶಗಳಲ್ಲಿ ಶಿಫಾರಸು ಮಾಡಲಾದ ಕ್ರಮಗಳನ್ನು ಕ್ಷೇತ್ರ ಪ್ರಾತ್ಯಕ್ಷಿಕೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಸಿರಸಿ, ಸಿದ್ದಾಪುರ, ಬೆಳ್ತಂಗಡಿ ಹಾಗೂ ಸುಳ್ಯ ಸೇರಿದಂತೆ ಏಳು ಕ್ಲಸ್ಟರ್‌ಗಳಲ್ಲಿ ಈ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ರೋಗದ ತೀವ್ರತೆ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ ಎಂದಿದ್ದಾರೆ.
ಎಲೆಚುಕ್ಕೆ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅಕ್ಕಪಕ್ಕದ ತೋಟಗಳಲ್ಲಿಯೂ ಶಿಫಾರಸು ಮಾಡಲಾದ ಕ್ರಮಗಳನ್ನು ಸಮನ್ವಯದಿಂದ ಅನುಸರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಮುದಾಯ ಆಧಾರಿತ ರೋಗ ನಿರ್ವಹಣೆ, ಕ್ಷೇತ್ರ ಪ್ರಾತ್ಯಕ್ಷಿಕೆ, ರೈತರಲ್ಲಿ ಜಾಗೃತಿ ಹಾಗೂ ವೈಜ್ಞಾನಿಕ ಕ್ರಮಗಳ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಚೌಹಾಣ್ ಅವರು ತಿಳಿಸಿದ್ದಾರೆ ಎಂದರು.
ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರ ಹಿತ ಕಾಪಾಡುವುದರ ಜತೆಗೆ ಅಡಿಕೆ ಕೃಷಿಯ ಉತ್ಪಾದಕತೆ ಮತ್ತು ಸುಸ್ಥಿರತೆ ಹೆಚ್ಚಿಸುವ ಉದ್ದೇಶದಿಂದ ಕಾಸರಗೋಡಿನ ಐಸಿಎಆರ್–ಸಿಪಿಸಿಆರ್‌ಐ ಸಂಸ್ಥೆಯು ರೋಗಗಳ ಕುರಿತು ವೈಜ್ಞಾನಿಕ ಸಂಶೋಧನೆಯನ್ನು ಮುಂದುವರಿಸಲಿದೆ. ಮುಂದಿನ ದಿನಗಳಲ್ಲಿಯೂ ಅಗತ್ಯ ತಾಂತ್ರಿಕ ನೆರವು ಮತ್ತು ಸಹಕಾರ ಒದಗಿಸಲಾಗುವುದು ಎಂದು ಕೇಂದ್ರ ಸಚಿವರು ಕ್ಯಾ. ಬ್ರಿಜೇಶ್ ಚೌಟ ಅವರಿಗೆ ನೀಡಿದ ಉತ್ತರದಲ್ಲಿ ಭರವಸೆ ನೀಡಿದ್ದಾರೆ.
What do you feel about this post?
Like
Love
Happy
Haha
Sad





