ಮಂಗಳೂರಿನಲ್ಲಿ ಎಂಎಸ್‌ಎಂಇ, ಸ್ಟಾರ್ಟ್‌ಅಪ್ ಕಾನ್‌ಕ್ಲೇವ್ ಉದ್ಘಾಟಿಸಿ ಸಂಸದ ಕೋಟ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ಶಿಕ್ಷಣದ ಬಳಿಕ ಉದ್ಯೋಗಕ್ಕಾಗಿ ಸರ್ಕಾರವನ್ನು ಅವಲಂಬಿಸುವ ಬದಲು ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್‌ಎಂಇ) ಸ್ಥಾಪಿಸಿ ಸ್ವಾವಲಂಬಿಗಳಾಗಬೇಕು. ಆ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

<

ನಗರದ ರೆಡ್‌ಕ್ರಾಸ್ ಪ್ರೇರಣಾ ಹಾಲ್‌ನಲ್ಲಿ ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ (ಎಂಪಿಸಿ) ಹಾಗೂ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಆಯೋಜಿಸಿದ್ದ ಎಂಪಿಸಿ–ರೋಟರಿ ಕೋಸ್ಟಲ್ ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್ ಕಾನ್‌ಕ್ಲೇವ್–2026 ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಅಥವಾ ರಾಜ್ಯ ಸರ್ಕಾರ ಒಟ್ಟು ಜನಸಂಖ್ಯೆಯ ಶೇ.1ರಷ್ಟು ಮಂದಿಗೆ ಮಾತ್ರ ಸರ್ಕಾರಿ ಉದ್ಯೋಗ ಒದಗಿಸಲು ಸಾಧ್ಯ. ದೇಶದಲ್ಲಿ 1.49 ಕೋಟಿ ಉದ್ಯಮಗಳು ಎಂಎಸ್‌ಎಂಇ ಅಡಿ ನೋಂದಣಿಯಾಗಿದ್ದು, ಅವು ₹15 ಲಕ್ಷ ಕೋಟಿ ಸಾಲ ಪಡೆದಿವೆ. ಇದರಿಂದ ಈ ಕ್ಷೇತ್ರದಲ್ಲಿರುವ ಬದ್ಧತೆ, ಪರಿಶ್ರಮ ಮತ್ತು ಉದ್ಯಮಶೀಲತೆಯ ಪ್ರಮಾಣವನ್ನು ಅರ್ಥಮಾಡಿಕೊಳ್ಳಬಹುದು’ ಎಂದರು.

ದು ಕಾಲದಲ್ಲಿ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ದೇಶದ ಚಿನ್ನವನ್ನು ವಿದೇಶದಲ್ಲಿ ಅಡವಿಡಬೇಕಾದ ಪರಿಸ್ಥಿತಿ ಇತ್ತು. ಇಂದು ಭಾರತ 68 ರಾಷ್ಟ್ರಗಳಿಗೆ ಸಾಲ ನೀಡುವ ಹಂತಕ್ಕೆ ಬೆಳೆದಿದೆ. ವಿದ್ಯುತ್ ಹಾಗೂ ಶೌಚಗೃಹ ಸೌಲಭ್ಯ ಇಲ್ಲದ ಗ್ರಾಮಗಳಿದ್ದ ದೇಶದಲ್ಲಿ ಇಂದು ಮನೆಮನೆಗೂ ಈ ಸೌಲಭ್ಯ ಕಲ್ಪಿಸಲಾಗಿದೆ. ಸುರಕ್ಷತೆ ಮತ್ತು ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಪ್ರಗತಿ ಸಾಧಿಸಿದೆ. ದೇಶದಲ್ಲಿ ಏನೂ ಆಗಿಲ್ಲ ಎಂದು ಪ್ರಶ್ನಿಸುವವರು ಈ ಬದಲಾವಣೆಗಳನ್ನು ಗಮನಿಸಬೇಕು ಎಂದು ಹೇಳಿದರು.

ಎಂಆರ್‌ಪಿಎಲ್‌ನ ಜಿಜಿಎಂ (ಮೆಟೀರಿಯಲ್ಸ್) ಶರತ್ ಬುಡಲೆ ಎಸ್. ಅವರು ಮಾತನಾಡಿ, ಉತ್ಪಾದನೆ ಮತ್ತು ಸೇವಾ ವಲಯಗಳ ಬೆಳವಣಿಗೆ ದೇಶದ ಆರ್ಥಿಕ ಪ್ರಗತಿಗೆ ನೆರವಾಗಿದೆ. ಉದ್ಯಮ ಕ್ಷೇತ್ರದ ಹೊಸ ಆವಿಷ್ಕಾರಗಳು ಹಾಗೂ ಯೋಜನೆಗಳು ಉದ್ಯೋಗ ಸೃಷ್ಟಿಸುವ ಮೂಲಕ ಯುವ ಸಮುದಾಯಕ್ಕೆ ಅವಕಾಶ ಕಲ್ಪಿಸುತ್ತಿವೆ. ಇಂತಹ ಕಾರ್ಯಾಗಾರಗಳು ಉದ್ಯಮ ಕ್ಷೇತ್ರಕ್ಕೆ ಪ್ರವೇಶಿಸುವವರಿಗೆ ಸಹಕಾರಿಯಾಗಲಿವೆ ಎಂದರು.

ಕರ್ಣಾಟಕ ಬ್ಯಾಂಕ್‌ ಸಿಒಒ ರಾಜಾ ಬಿ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಎಂಎಸ್‌ಎಂಇ ಹಾಗೂ ಸ್ಟಾರ್ಟ್‌ಅಪ್‌ಗಳು ಉದ್ಯೋಗ ಸೃಷ್ಟಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಸಣ್ಣ ಹಂತದಲ್ಲಿ ಆರಂಭವಾಗುವ ಉದ್ಯಮಗಳು ಮುಂದೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತವೆ ಎಂಬುದಕ್ಕೆ ಫ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ಸಂಸ್ಥೆಗಳು ಉದಾಹರಣೆ ಎಂದರು.

ಜಪಾನ್–ಟೋಕಿಯೊ ಚೇಂಬರ್ ಆಫ್ ಕಾಮರ್ಸ್ ಕಮಿಟಿ ಸದಸ್ಯ ಪ್ರೊ. ಹರಿಕೃಷ್ಣ ಭಟ್, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಇಂಡಿಯಾ) ಅಧ್ಯಕ್ಷ ರಾಜೇಂದ್ರ ಕಲ್ಬಾವಿ, ಮಂಗಳೂರು ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ರವೀಂದ್ರ ಬಿ.ಎನ್., ಕಾರ್ಯದರ್ಶಿ ಜಾಕ್ಸನ್ ಸಲ್ಡಾನ್ಹ, ಡಾ. ದೇವದಾಸ್ ರೈ, ಎಂಪಿಸಿ ಅಧ್ಯಕ್ಷ ಯು. ರಾಮ ರಾವ್ ಉಪಸ್ಥಿತರಿದ್ದರು.

ಎಂಪಿಸಿ ಕಾನ್‌ಕ್ಲೇವ್ ನಿರ್ದೇಶಕ ಹಾಗೂ ಮಹಾಪೋಷಕ ಸಿಎ ಎಸ್.ಎಸ್. ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಂಪಿಸಿ ಕಾರ್ಯದರ್ಶಿ ಡಾ. ಪಿ.ಜಿ. ಮಹೇಶ್ ವಂದಿಸಿದರು. ಸಿಎ ಯಶಸ್ವಿನಿ ಅಮೀನ್ ಹಾಗೂ ಡ್ಯಾರಿಲ್ ಡಿಸೋಜ ನಿರೂಪಿಸಿದರು.

ಬಳಿಕ ವಿವಿಧ ವಿಷಯಗಳಿಗೆ ಸಂಬಂಧಿಸಿದ ಉದ್ಯಮ ಕಾರ್ಯಾಗಾರಗಳು ನಡೆದವು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *