ಚಂಡಮಾರುತ ಎದುರಿಸುವ ಸಿದ್ಧತೆ ಪರೀಕ್ಷೆ, ಅಣಕು ಕಾರ್ಯಾಚರಣೆ ಯಶಸ್ವಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಜಿಲ್ಲಾ ಸುದ್ದಿ ಕಾರವಾರ ಶಿರಸಿ

Spread the love

ಕಾರವಾರ: ಜಿಲ್ಲೆಯಲ್ಲಿ ಸಂಭವಿಸಬಹುದಾದ ಚಂಡಮಾರುತ ಹಾಗೂ ಅದರಿಂದ ಉಂಟಾಗುವ ವಿವಿಧ ವಿಪತ್ತುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಜಿಲ್ಲಾಡಳಿತದ ಸಿದ್ಧತೆಯನ್ನು ಪರೀಕ್ಷಿಸುವ ಉದ್ದೇಶದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಗುರುವಾರ ನಡೆಸಿದ ಅಂತರರಾಜ್ಯ ಚಂಡಮಾರುತ ಅಣಕು ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕಂದಾಯ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಆರೋಗ್ಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಬಂದರು, ಸ್ಥಳೀಯ ಸಂಸ್ಥೆಗಳು ಹಾಗೂ ನೌಕಾಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಾಚರಣೆ ನಡೆಯಿತು. ಚಂಡಮಾರುತದ ವೇಳೆ ಸಂಭವಿಸಬಹುದಾದ ಭಾರಿ ಮಳೆ, ಬಿರುಗಾಳಿ, ಸಮುದ್ರದ ಅಬ್ಬರ, ಕಡಲಕೊರೆತ, ಪ್ರವಾಹ, ಮರಗಳ ಉರುಳುವಿಕೆ, ವಿದ್ಯುತ್ ಕಂಬಗಳಿಗೆ ಹಾನಿ ಸೇರಿದಂತೆ ವಿವಿಧ ತುರ್ತು ಪರಿಸ್ಥಿತಿಗಳನ್ನು ಕೃತಕವಾಗಿ ಸೃಷ್ಟಿಸಿ, ಅವುಗಳನ್ನು ಎದುರಿಸುವ ಇಲಾಖೆಗಳ ಸನ್ನದ್ಧತೆಯನ್ನು ಪರಿಶೀಲಿಸಲಾಯಿತು.

ಚಂಡಮಾರುತದ ಎಚ್ಚರಿಕೆ ಮಾಹಿತಿ ಬಂದ ತಕ್ಷಣ ಜಿಲ್ಲಾಧಿಕಾರಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ನಡೆಸಿ, ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ತುರ್ತು ಕಾರ್ಯಾಚರಣಾ ಕೇಂದ್ರವನ್ನು ತಕ್ಷಣ ಸಕ್ರಿಯಗೊಳಿಸಿ, ವಿವಿಧ ಇಲಾಖೆಗಳ ಕಾರ್ಯಚಟುವಟಿಕೆಗಳನ್ನು ಅಲ್ಲಿಂದಲೇ ಸಮನ್ವಯಗೊಳಿಸಲಾಯಿತು.

ಬೈತ್‌ಖೋಲ್‌ನಲ್ಲಿ ಸ್ಥಳಾಂತರ, ವೈದ್ಯಕೀಯ ನೆರವು

ಬೈತ್‌ಖೋಲ್‌ನ ತಗ್ಗು ಪ್ರದೇಶವನ್ನು ಚಂಡಮಾರುತದಿಂದ ತೀವ್ರವಾಗಿ ಬಾಧಿತ ಪ್ರದೇಶವೆಂದು ಪರಿಗಣಿಸಿ ಅಣಕು ಕಾರ್ಯಾಚರಣೆ ನಡೆಸಲಾಯಿತು. ಅಪಾಯಕ್ಕೊಳಗಾಗಬಹುದಾದ ಪ್ರದೇಶಗಳ ಜನರನ್ನು ಸ್ಥಳಾಂತರಿಸಿ ಸಮೀಪದ ಕಾಳಜಿ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಗಂಭೀರವಾಗಿ ಗಾಯಗೊಂಡವರನ್ನು ಕ್ರಿಮ್ಸ್ ಆಸ್ಪತ್ರೆ ಹಾಗೂ ಬೈತ್‌ಖೋಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು. ಕ್ರಿಮ್ಸ್‌ನಲ್ಲಿ ಸಾಮೂಹಿಕ ಸಾವು-ನೋವು ನಿರ್ವಹಣೆಯ ಅಣಕು ಕಾರ್ಯಾಚರಣೆಯನ್ನೂ ನಡೆಸಲಾಯಿತು.

ವೈದ್ಯಕೀಯ, ಪಶುಪಾಲನಾ ಹಾಗೂ ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿ ತುರ್ತು ಕಾರ್ಯಾಚರಣೆ ನಡೆಸಿದವು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕೂಡ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಭಾಗವಹಿಸಿತು.

ಕುಮಟಾದಲ್ಲಿ ಪ್ರವಾಹದ ಅಣಕು

ಕುಮಟಾ ಹೊಸ ಬಸ್ ನಿಲ್ದಾಣದ ಬಳಿ ಪ್ರವಾಹ ಉಂಟಾಗಿ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಹಾನಿಯಾಗಿದೆ ಎಂಬ ಸನ್ನಿವೇಶ ಸೃಷ್ಟಿಸಿ ಕಾರ್ಯಾಚರಣೆ ನಡೆಸಲಾಯಿತು. ರಕ್ಷಣಾ ತಂಡಗಳನ್ನು ತಕ್ಷಣ ಸಕ್ರಿಯಗೊಳಿಸಿ, ಬಾಧಿತ ನಿವಾಸಿಗಳನ್ನು ಸರ್ಕಾರಿ ಶಾಲೆಗಳು ಹಾಗೂ ಇತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಸ್ಥಳಾಂತರಗೊಂಡವರಿಗೆ ಆಹಾರ, ಕುಡಿಯುವ ನೀರು, ವಿದ್ಯುತ್, ನೈರ್ಮಲ್ಯ ಮತ್ತು ವೈದ್ಯಕೀಯ ನೆರವು ಒದಗಿಸುವ ವ್ಯವಸ್ಥೆ ಮಾಡಲಾಯಿತು. ಸ್ಥಳಾಂತರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಸರ್ಕಾರಿ ವಾಹನಗಳನ್ನು ಬಳಸಲಾಯಿತು. ಟೌನ್‌ಹಾಲ್‌ ಅನ್ನು ತಾತ್ಕಾಲಿಕ ಪರಿಹಾರ ಮತ್ತು ಆಶ್ರಯ ಕೇಂದ್ರವಾಗಿ ಸಿದ್ಧಪಡಿಸಲಾಯಿತು.

ಕಾಸರಕೋಡಿನಲ್ಲಿ ದೋಣಿ ಮುಳುಗಡೆ

ಕಾಸರಕೋಡು ಹಿನ್ನೀರು ಪ್ರದೇಶದಲ್ಲಿ ಎರಡು ದೋಣಿಗಳು ಮುಳುಗಿದ ಸನ್ನಿವೇಶವನ್ನು ಸೃಷ್ಟಿಸಲಾಯಿತು. ಒಂದು ದೋಣಿ ಸಂಪೂರ್ಣ ಮುಳುಗಿ ಒಬ್ಬರು ಮೃತಪಟ್ಟಿದ್ದು, ದೋಣಿಯಲ್ಲಿದ್ದ ಸುಮಾರು 20 ಮಂದಿಯನ್ನು ರಕ್ಷಿಸಲಾಗಿದೆ ಎಂಬ ಸನ್ನಿವೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಗಾಯಗೊಂಡವರನ್ನು ಸಮೀಪದ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಯಿತು. 12 ಪ್ರಾಣಿಗಳನ್ನೂ ರಕ್ಷಿಸಲಾಯಿತು.

ಮುರ್ಡೇಶ್ವರದಲ್ಲಿ ಪ್ರವಾಸಿಗರ ರಕ್ಷಣೆ

ಮುರ್ಡೇಶ್ವರ ಕಡಲತೀರದಲ್ಲಿ ಭಾರಿ ಅಲೆಗಳ ನಡುವೆ ಸಿಲುಕಿದ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸುವ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಮೀನುಗಾರಿಕೆ, ಕರಾವಳಿ ಭದ್ರತಾ ಪೊಲೀಸ್ ಸೇರಿದಂತೆ ವಿವಿಧ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದವು. ರಕ್ಷಿಸಲಾದವರಿಗೆ ಪ್ರಥಮ ಚಿಕಿತ್ಸೆ ಹಾಗೂ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಯಿತು.

ತಡಡಿ ಬಂದರಿನಲ್ಲಿ ಮೀನುಗಾರರ ಸ್ಥಳಾಂತರ

ತಡಡಿ ಬಂದರಿನಲ್ಲಿ ಪ್ರತಿಕೂಲ ಹವಾಮಾನದಿಂದ ಎರಡು ಮೀನುಗಾರಿಕಾ ದೋಣಿಗಳು ಸಮುದ್ರದಲ್ಲಿ ಸಿಲುಕಿಕೊಂಡ ಸನ್ನಿವೇಶ ಸೃಷ್ಟಿಸಿ, ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಬಂದರು ಸಮೀಪದ ತಗ್ಗು ಪ್ರದೇಶಗಳ ನಿವಾಸಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಮಾದನಗೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಕಾಳಜಿ ಕೇಂದ್ರದಲ್ಲಿ ಆಹಾರ, ಕುಡಿಯುವ ನೀರು, ಆಶ್ರಯ, ನೈರ್ಮಲ್ಯ ಮತ್ತು ವೈದ್ಯಕೀಯ ನೆರವಿನ ವ್ಯವಸ್ಥೆ ಮಾಡಲಾಯಿತು. ಅಪಾಯದ ಪ್ರದೇಶಗಳಲ್ಲಿದ್ದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸುವುದು ಸೇರಿದಂತೆ ರಕ್ಷಣೆ, ಸ್ಥಳಾಂತರ ಮತ್ತು ಪರಿಹಾರ ಕ್ರಮಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಯಿತು.

ಬೆಳಸೆ ರೈಲ್ವೆ ಕಟಿಂಗ್‌ನಲ್ಲಿ ಭೂಕುಸಿತ

ಚಂಡಮಾರುತದ ಪರಿಣಾಮ ಬೆಳಸೆ ರೈಲ್ವೆ ಕಟಿಂಗ್‌ನಲ್ಲಿ ಭೂಕುಸಿತ ಸಂಭವಿಸಿ ರೈಲು ಹಳಿಗೆ ಅಡಚಣೆ ಉಂಟಾದ ಸನ್ನಿವೇಶವನ್ನೂ ಅಣಕು ಕಾರ್ಯಾಚರಣೆಯಲ್ಲಿ ಸೃಷ್ಟಿಸಲಾಯಿತು. ರೈಲು ಸಂಚಾರವನ್ನು ಪರ್ಯಾಯ ಮಾರ್ಗಕ್ಕೆ ತಿರುಗಿಸಿ, ಸ್ಥಳಕ್ಕೆ ಧಾವಿಸಿದ ತಂಡಗಳು ಹಳಿಯ ಮೇಲಿದ್ದ ಭಗ್ನಾವಶೇಷಗಳನ್ನು ತೆರವುಗೊಳಿಸಿದವು.

ಭೂಕುಸಿತದಿಂದ ತೊಂದರೆಗೊಳಗಾದವರನ್ನು ಪತ್ತೆಹಚ್ಚಿ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಪ್ರಥಮ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವು ನೀಡಲಾಯಿತು. ರೈಲ್ವೆ ಅಧಿಕಾರಿಗಳು, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಸಮನ್ವಯವನ್ನು ಈ ಕಾರ್ಯಾಚರಣೆಯಲ್ಲಿ ಪರೀಕ್ಷಿಸಲಾಯಿತು.

ಶಾಲೆಗಳಿಗೆ ರಜೆ ಘೋಷಣೆ

ಕಾರ್ಯಾಚರಣೆಯ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್‌ಗಳನ್ನು ಬಳಸಲಾಯಿತು. ಸಂತ್ರಸ್ತರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಅಣಕು ಕಾರ್ಯಾಚರಣೆಯನ್ನೂ ನಡೆಸಲಾಯಿತು. ಚಂಡಮಾರುತದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಆದೇಶದ ಅನುಷ್ಠಾನವನ್ನೂ ಪರಿಶೀಲಿಸಲಾಯಿತು.

ಕಾರ್ಯಾಚರಣೆಯ ಪ್ರತಿಯೊಂದು ಹಂತದಲ್ಲೂ ಜಿಲ್ಲಾಡಳಿತ ಕೈಗೊಂಡ ಸುರಕ್ಷತಾ ಕ್ರಮಗಳು ಹಾಗೂ ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಮಾಧ್ಯಮಗಳ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಯಿತು. ಸುಳ್ಳು ಸುದ್ದಿಗಳಿಂದ ಸಾರ್ವಜನಿಕರಲ್ಲಿ ಅನಗತ್ಯ ಭಯ ಮತ್ತು ಆತಂಕ ಉಂಟಾಗದಂತೆ ಮಾಹಿತಿ ಪ್ರಸರಣದ ವ್ಯವಸ್ಥೆಯನ್ನೂ ಪರೀಕ್ಷಿಸಲಾಯಿತು.

ನಿಗದಿತ ಅವಧಿಯೊಳಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ಅಣಕು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಎಸ್ ಪಿ ದೀಪನ್ ಎಂ.ಎನ್., ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ, ಗೃಹರಕ್ಷಕ, ಕಂದಾಯ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಅಣಕು ಕಾರ್ಯಾಚರಣೆಯಲ್ಲಿ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry